ಕಾರವಾರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಾರವಾರ, ಮುರುಡೇಶ್ವರ, ಹೊನ್ನಾವರದಲ್ಲಿ ಕಡಲು ಉಕ್ಕೇರಿ ಅಂಗಡಿ, ದೋಣಿಗಳು ಕೊಚ್ಚಿ ಹೋಗಿವೆ.
ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿನ್ನೆ ಸಂಜೆಯಿಂದಲೂ ನಿರಂತರ ಮಳೆ ಸುರಿಯುತ್ತಿದೆ. ಪರಿಣಾಮ ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಶರಾವತಿ ನದಿಯಿಂದ ಅಧಿಕ ನೀರು ಹರಿದು ಬರುತ್ತಿರುವ ಕಾರಣ ಹೊನ್ನಾವರ ಬಂದರಿನಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ.
ಇನ್ನು ಮುರುಡೇಶ್ವರದಲ್ಲಿ ಅಲೆಗಳ ಅಬ್ಬರಕ್ಕೆ ಕಡಲ ತೀರದಲ್ಲಿ ಇಟ್ಟಿದ್ದ ದೋಣಿ, ಅಂಗಡಿಗಳು ಕೊಚ್ಚಿ ಹೋಗಿವೆ. ಜನರು ಅವುಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾರವಾರದ ದೇವಭಾಗ್ ಬೀಚ್ ಬಳಿ ದಡದಲ್ಲಿ ಇಟ್ಟಿದ್ದ ಬೋಟ್ಗಳು ಕೊಚ್ಚಿ ಹೋಗಿದ್ದು, ಕೆಲವು ಕಲ್ಲಿಗೆ ಬಡಿದು ಹಾನಿಯಾಗಿವೆ.
ಇನ್ನು ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದರಿಂದ ಕಾರವಾರ ಹೊನ್ನಾವರ, ತದಡಿ ಬಂದರುಗಳಲ್ಲಿ ಕರ್ನಾಟಕ, ಗೋವಾ ಮೀನುಗಾರಿಕಾ ಬೋಟ್ಗಳು ಲಂಗುರು ಹಾಕಿ ಆಶ್ರಯ ಪಡೆದಿವೆ.