ಶಿರಸಿ: ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಶಿರಸಿ ತಾಲೂಕಿನಲ್ಲಿ ಕೆರೆಯ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ. ಜೊತೆಗೆ ಶಿರಸಿ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ರಮುಖ ಮಾರ್ಗಗಳ ಸಂಪರ್ಕ ಕಡಿತಗೊಂಡಿದೆ.
ಶಿರಸಿ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬನವಾಸಿಯ ಹೆಬ್ಬಳ್ಳಿ, ಕಲಕರಡಿ, ಅಂಡಗಿ, ಹೆಬ್ಬತ್ತಿ, ರಂಗಾಪುರ, ಸಂತೊಳ್ಳಿ, ಹಾಡಲಗಿ, ಗುಡ್ನಾಪುರ, ಮಧುರವಳ್ಳಿ ಮತ್ತಿತರ ಕಡೆ ಶುಂಠಿ, ಬಾಳೆ, ಅನಾನಸ್, ಜೋಳ ಹಾಗೂ ಅಡಕೆ ತೋಟಗಳು ಜಲವೃತ್ತಗೊಂಡಿವೆ. ಶಿರಸಿ - ಸಿದ್ದಾಪುರ, ಶಿರಸಿ-ಕುಮಟಾ ಸಂಪರ್ಕ ಕಡಿತಗೊಂಡಿದೆ.
ಗ್ರಾಮೀಣ ಭಾಗಗಳಾದ ಕೆಂಗ್ರೆ, ಪಟ್ಟಣಹೊಳೆ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಕಕ್ಕಳ್ಳಿ ಸಮೀಪ ಮರ ಬಿದ್ದ ಪರಿಣಾಮ ವಾನಳ್ಳಿ-ಕಕ್ಕಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು, ಶಿರಸಿ ನಗರದ ರಾಮನತಗ್ಗು, ಪಡ್ತಿಗಲ್ಲಿ ಹಾಗೂ ಭೂತೇಶ್ವರ ಕಾಲೋನಿಯ ಕೆಲ ಮನೆಯ ಆವರಣಕ್ಕೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಮಳೆಗೆ ಸಿಲುಕಿ ವ್ಯಕ್ತಿ ಸಾವು
ತುಂಬಿ ಹರಿಯುತ್ತಿದ್ದ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಾಪುರ ಕೆರೆಯ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಶುಕ್ರವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಹುಸರಿ ಗ್ರಾಮದ ಗಂಗಾಧರ ತಿಮ್ಮಗೌಡ (28) ಮೃತ ಯುವಕ. ತಿಮ್ಮಗೌಡ ಬೈಕ್ನಲ್ಲಿ ತೆರಳುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೆರೆಗೆ ಬಿದ್ದಿದ್ದ. ಸತತ ಕಾರ್ಯಾಚರಣೆ ಬಳಿಕ ಶವ ಪತ್ತೆ ಹಚ್ಚಿ ಹೊರಕ್ಕೆ ತೆಗೆಯಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಯಲ್ಲಾಪುರದ ಬೇಡ್ತಿ ನದಿಯ ಹಿಂದಿನ ಸೇತುವೆ ಮುಳಿಗ ಹಂತದಲ್ಲಿದ್ದು, ನದಿ ಪಾತ್ರದ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಅದೇ ರೀತಿ ಸಿದ್ದಾಪುರದ ಕಲ್ಯಾಣಪುರ, ಹೆಮ್ಮನಬೈಲ್ ಭಾಗಗಳಲ್ಲಿ ಜಲಾವೃತವಾಗಿದ್ದು, ಕಲ್ಯಾಣಪುರದ 6 ಹಾಗೂ ಹೆಮ್ಮನಬೈಲ್ನ 6 ಕುಟುಂಬಗಳನ್ನು ಹತ್ತಿರದ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.