ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಧಾರೆ ಜೋರಾಗಿದೆ. ಇಲ್ಲಿನ ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನಕ್ಕೆ ಸಮಸ್ಯೆಯಾಗಿದೆ.
ತಾಲೂಕಿನ ಅಮದಳ್ಳಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ಉಕ್ಕಿ ಹರಿಯುತ್ತಿದೆ. ಹೆದ್ದಾರಿಯಲ್ಲಿ ಎದೆಮಟ್ಟ ನೀರು ತುಂಬಿ ಹರಿಯುತ್ತಿದೆ. ಇದರಿಂದ ಎರಡು ಬದಿಯ ವಾಹನಗಳು ಸಂಚರಿಸಲು ಸಾಧ್ಯವಾಗದೇ ಸಾಲುಗಟ್ಟಿ ನಿಂತಿವೆ.
ಅಮದಳ್ಳಿ, ಚೆಂಡಿಯಾ ಹಾಗೂ ಮುದಗಾದ ಮೇಲಿನಕೇರಿ ಬಳಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಇದಲ್ಲದೇ ಜಿಲ್ಲೆಯ ಕರಾವಳಿ ತಾಲೂಕುಗಳು ಹಾಗೂ ಘಟ್ಟದ ಮೇಲ್ಭಾಗದಲ್ಲಿಯೂ ಜೋರು ಮಳೆಯಾಗುತ್ತಿದೆ.