ಶಿರಸಿ (ಉತ್ತರ ಕನ್ನಡ): ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ಗುರುವಾರ ರಾತ್ರಿ ರಾಜೀನಾಮೆ ಸಲ್ಲಿಸಿದರು. ಆಪ್ತರ ಜೊತೆಗೆ ಶಿರಸಿಗೆ ಆಗಮಿಸಿದ ಅವರು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಪಕ್ಷ ವರಿಷ್ಠರ ನಿಲುವು. ವಿಜಯೇಂದ್ರ ಆಪ್ತರಿಗೆ ಸೀಟು ನೀಡಿದ್ದಾರೆ. ಹೊಸದುರ್ಗ ಸಾಮಾನ್ಯ ಕ್ಷೇತ್ರ. ನಾನು ಪರಿಶಿಷ್ಟ ಜಾತಿಗೆ ಸೇರಿದವನು. ಸಾಮಾಜಿಕ ನ್ಯಾಯದಡಿಯಲ್ಲಿ ನನಗೆ ಟಿಕೆಟ್ ತಪ್ಪಿರಬಹುದು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ" ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, "ಮುಂದಿನ ನಡೆಯ ಬಗ್ಗೆ ನಾನೆ ಮಾತುಕತೆಯ ನಂತರ ತೀರ್ಮಾನ ಆಗಲಿದೆ. ನಿನ್ನೆ, ಮೊನ್ನೆ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ರಾಜ್ಯ, ಕೇಂದ್ರ, ಜಿಲ್ಲೆಯಲ್ಲಿ ಎಲ್ಲರೂ ಸ್ಪಂದಿಸಿದ್ದಾರೆ. ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ಬಿ ಫಾರಂ ವಿತರಣೆ: ಚಿತ್ರದುರ್ಗದಿಂದ ಕಣದಲ್ಲಿದ್ದಾರೆ 75ರ ಜಿ.ತಿಪ್ಪಾರೆಡ್ಡಿ