ಕಾರವಾರ: ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಘೋಷಣೆ ಮಾಡಿದ ಬೆನ್ನಲ್ಲೇ ಆಕಾಂಕ್ಷಿಗಳಿಗೆ ಆಯ್ಕೆ ಪೂರ್ವ ತರಬೇತಿ ನೀಡುವ ಸಲುವಾಗಿ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತರಬೇತಿ ಶಾಲೆ ಆರಂಭಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಆದೇಶವನ್ನು ಹೊರಡಿಸಲಾಗಿದೆ. ಇನ್ನೊಂದು ತಿಂಗಳಲ್ಲೇ ಅನುಷ್ಠಾನ ಮಾಡಲು ರಾಜ್ಯ ಸಾರ್ಕರ ನಿರ್ಧರಿಸಿದೆ.
ಕರಾವಳಿ ಜಿಲ್ಲೆಯ ಸ್ಥಳೀಯ ಸ್ವತಂತ್ರ ಹೋರಾಟಗಾರರ ಹೆಸರಿನಲ್ಲಿ ಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹೆಂಜಾ ನಾಯ್ಕ, ಉಡುಪಿ ಜಿಲ್ಲೆಯ ಕೋಟಿ ಚನ್ನಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ವೀರ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದೆ. ಸದ್ಯ ಈ ಶಾಲೆ ಪ್ರಾರಂಭಿಸಲು ಸೂಕ್ತ ಸ್ಥಳವನ್ನು ಶೋಧಿಸಲಾಗುತಿದ್ದು, ಶೀಘ್ರ ಪ್ರಾರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇನೆ, ಇತರ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸುವ ಸಲುವಾಗಿ ತರಬೇತಿ ಶಾಲೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಭಾರತೀಯ ಸೇನೆ ಮತ್ತು ಇತರ ಯುನಿಫಾರ್ಮ ಸೇವೆಗಳಿಗೆ ಸೇರಬಯಸುವ ರಾಜ್ಯದ ಎಲ್ಲಾ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಭಾಗವಾಗಿದ್ದು, ಇವರ ತರಬೇತಿಗೆ ತಗಲುವ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ಭರಿಸಲಿದೆ.
ಇದನ್ನೂ ಓದಿ: ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ತಡೆದು ನಿಲ್ಲಿಸದಿರಿ.. ಪ್ರವೀಣ್ ಸೂದ್ ಸೂಚನೆ