ಕಾರವಾರ/ಉತ್ತರ ಕನ್ನಡ: ದೇಶದ ಇತಿಹಾಸವೇ ಗೊತ್ತಿಲ್ಲದ ಸಂಸದ ಅನಂತಕುಮಾರ್ ಹೆಗಡೆ ಒಬ್ಬ ಅವಿವೇಕಿ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಟೀಕಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕುಮಟಾದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದ್ರು.
ಬಿಜೆಪಿಗರು ಗೋಡ್ಸೆ ಸಂತತಿಯವರು, ಗೋಡ್ಸೆ ಪೂಜಿಸುವ ಬಿಜೆಪಿಗರಿಗೆ ಇತಿಹಾಸವೇ ಗೊತ್ತಿಲ್ಲ. ಸಂಸದ ಅನಂತಕುಮಾರ್ ಇತಿಹಾಸ ಓದಿದ್ದರೇ ಈ ರrತಿ ಮಾತನಾಡುತ್ತಿರಲಿಲ್ಲ. ಇಂದು ಚಿಕ್ಕ ಮಕ್ಕಳನ್ನು ಕೇಳಿದರೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳುತ್ತಾರೆ. ಆದರೆ ನಮ್ಮ ಸಂಸದರು ಅಭಿವೃದ್ಧಿಯ ಬಗ್ಗೆ ಮಾತಾಡುವುದನ್ನು ಬಿಟ್ಟು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಅವಹೇಳನ ಮಾಡಿರುವುದರಿಂದ ಈ ಜಿಲ್ಲೆಯ ಜನರಾದ ನಾವೆಲ್ಲರೂ ತಲೆತಗ್ಗಿಸಬೇಕಾಗಿದೆ ಎಂದ್ರು.
ಅನಂತ ಕುಮಾರ್ಗೆ ಬಿಜೆಪಿ ಶೋಕಾಸ್ ನೋಟಿಸ್ ಕೊಟ್ಟಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಪ್ರಚೋದನಕಾರಿ ಹೇಳಿಕೆಯಿಂದಲೇ ದಿನ ಕಳೆಯುವ ಸಂಸದರ ಅಗತ್ಯ ನಮ್ಮ ಜಿಲ್ಲೆಗಿಲ್ಲ. ಗಲಾಟೆ, ಕಲ್ಲು ತೂರಾಟ, ಬೆಂಕಿ ಹಚ್ಚುವುದು ಇಂತವುಗಳೇ ಅನಂತಕುಮಾರ ಹೆಗಡೆಯವರಿಗೆ ಸ್ವಾತಂತ್ರ್ಯ ಎಂದು ಕಿಡಿಕಾರಿದರು. ಈ ಹಿಂದೆ ಪರೇಶ್ ಮೇಸ್ತ ಪ್ರಕರಣದಲ್ಲಿ ಸಿಲುಕಿರುವ ಅಮಾಯಕರು ಇಂದಿಗೂ ಕೋರ್ಟ್ ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಅಂದು ಇದೇ ಸಂಸದರು ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಆದರೆ ಇದೀಗ ಅವರಿಗೆ ತಮ್ಮ ಮಾತು ನೆನಪಿಗೆ ಬರುತ್ತಿಲ್ಲ. ಸಂಸದರು ಇಂತಹ ಅಸಂಬದ್ಧ ಹೇಳಿಕೆ ನೀಡುವ ಮೊದಲು ಅಮಾಯಕರ ಮೇಲೆ ದಾಖಲಾಗಿರುವ ದೂರನ್ನು ಹಿಂಪಡೆದು ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.