ಕಾರವಾರ: ಐಎನ್ಎಸ್ ವಿಕ್ರಮಾದಿತ್ಯ ಯುದ್ದನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿ, ಒಬ್ಬ ಲೆಫ್ಟಿನೆಂಟ್ ಕಮಾಂಡೊ ಅಧಿಕಾರಿ ಸಾವಿಗೀಡಾಗಿದ್ದು, ಏಳು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಸಂಭವಿಸಿದೆ.
ಲೆಫ್ಟಿನೆಂಟ್ ಕಮಾಂಡರ ಡಿ.ಎಸ್. ಚೌಹಾಣ್ ಮೃತಪಟ್ಟ ಅಧಿಕಾರಿ. ಗಾಯಗೊಂಡಿರುವ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಾದಿಂದ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆಗೆ ಆಗಮಿಸುತ್ತಿದ್ದ ವೇಳೆ ಯುದ್ಧನೌಕೆಯ ಬಾಯ್ಲರ್ ಕಂಪಾರ್ಟ್ಮೆಂಟ್ನಲ್ಲಿ ಅಗ್ನಿ ಅನಾಹುತ ಉಂಟಾಗಿದೆ. ಈ ವೇಳೆ ಬಾಯ್ಲರ್ ಕಂಪಾರ್ಟ್ಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ದ ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ತಕ್ಷಣ ನೌಕಾನೆಲೆ ಸಮೀಪದ ಪತಂಜಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೌಕೆಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲಾಗಿದೆ.
ಏಷ್ಯಾದಲ್ಲೇ ಅತಿದೊಡ್ಡ ಯುದ್ಧನೌಕೆಯಾಗಿರುವ ಐಎನ್ಎಸ್ ವಿಕ್ರಮಾದಿತ್ಯ ಕಳೆದ 15 ದಿನಗಳ ಹಿಂದೆ ಗುಜರಾತ್ನಿಂದ ಹೊರಟಿತ್ತು. ಭಾರತ ಮತ್ತು ಫ್ರಾನ್ಸ್ ನೌಕಾಪಡೆಗಳು ಮೇ ಮೊದಲ ವಾರದಲ್ಲಿ ಕಾರವಾರ ಮತ್ತು ಗೋವಾ ಸಮುದ್ರದಲ್ಲಿ ಬಾರಿಗೆ ಬೃಹತ್ ಸಮರಾಭ್ಯಾಸ ನಡೆಸುವ ಕಾರಣ ನೌಕೆ ಆಗಮಿಸುತ್ತಿತ್ತು.
'ವರುಣ್' ಹೆಸರಿನಡಿ ನಡೆಯುವ ಸಮರಾಭ್ಯಾಸಕ್ಕಾಗಿ ಗೋವಾಕ್ಕೆ ತೆರಳಿದ್ದ ವಿಕ್ರಮಾದಿತ್ಯ ನೌಕೆ ಸೀಬರ್ಡ್ ನೌಕಾನೆಲೆಗೆ ಬಂದಿತ್ತು. ನೌಕೆ ಲಂಗರು ಹಾಕುವ ವೇಳೆ ಬಾಯ್ಲರ್ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೂ ಇದೇ ರೀತಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಇಲ್ಲಿನ ಕಾರ್ಮಿಕನೊಬ್ಬ ಮೃತಪಟ್ಟಿದ್ದ.