ಶಿರಸಿ: ಕೊರೊನಾ ಲಾಕ್‌ಡೌನ್ ಕಾರಣದಿಂದ ವಿವಿಧ ವಲಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ, ಹೈನೋದ್ಯಮ ಮಾತ್ರ ಸುಸೂತ್ರವಾಗಿ ನಡೆಯುತ್ತಿದೆ. ಇದರಿಂದ ಧಾರವಾಡ ಹಾಲು ಒಕ್ಕೂಟಕ್ಕೆ ನಿಗದಿತ ಸಮಯಕ್ಕಿಂತ ಅಧಿಕ ಹಾಲು ಬರುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಿನಕ್ಕೆ ಸರಾಸರಿ 62 ಸಾವಿರ ಲೀಟರ್‌ಗಳಷ್ಟು ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ.
ಕಳೆದ ವರ್ಷ ಜೂನ್ ವೇಳೆಗೆ ಧಾರವಾಡ ಹಾಲು ಒಕ್ಕೂಟಕ್ಕೆ ಅಂದಾಜು 2.20 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈ ಬಾರಿ ಅದು 2.80 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯೊಂದರಲ್ಲೇ ಒಂದು ವರ್ಷದಲ್ಲಿ ಹಾಲಿನ ಉತ್ಪಾದನೆಯಲ್ಲಿ ಶೇ.22.99 ರಷ್ಟು ಏರಿಕೆ ಕಂಡಿದ್ದು, ದಿನವೊಂದಕ್ಕೆ ಅಂದಾಜು 13 ಸಾವಿರ ಲೀಟರ್ ಹಾಲು ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 289 ಡೇರಿಗಳಿದ್ದು, ಸುಮಾರು 8,200 ಮಂದಿ ಹಾಲು ಹಾಕುವವರಿದ್ದಾರೆ. ಅವರಿಂದ ಕಳೆದ ವರ್ಷ ಈ ವೇಳೆಗೆ ದಿನವೊಂದಕ್ಕೆ 38 ಸಾವಿರ ಲೀ. ಹಾಲು ಉತ್ಪಾದನೆ ಆಗುತ್ತಿತ್ತು. ಆದರೆ ಈ ಬಾರಿ ವಿವಿಧ ಕಾರಣಗಳಿಂದ ಅಂದಾಜು 13 ಸಾವಿರ ಲೀಟರ್ ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿದೆ.
ಲಾಕ್ ಡೌನ್ಗಿಂತ ಮೊದಲು ಸಭೆ, ಸಮಾರಂಭಗಳಿಗೆ ನೇರವಾಗಿ ಹಾಲು ಮಾರಾಟ ಆಗುತ್ತಿತ್ತು. ಆದರೆ, ಈ ಬಾರಿ ಲಾಕ್ ಡೌನ್ ಕಾರಣ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹಾಗಾಗಿ, ನೇರವಾಗಿ ಹಾಲು ಖರೀದಿ ಆಗುತ್ತಿಲ್ಲ. ಅಲ್ಲದೆ, ಹಾಲಿನ ಪ್ಯಾಕೆಟ್ಗೂ ಬೇಡಿಕೆ ತಗ್ಗಿದೆ. ಈ ಎಲ್ಲಾ ಕಾರಣಗಳಿಂದ ಮುಖ್ಯ ಡೇರಿಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿದೆ.