ಕಾರವಾರ: ಧಾರವಾಡ- ಬೆಳಗಾವಿ ಭಾಗದಲ್ಲಿ ಕೋವಿಡ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಅಧಿವೇಶನ ನಡೆಸಬೇಕು ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಳಗಾವಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಸಮಸ್ಯೆ ಎದುರಾಗಬಹುದು. ಇದರಿಂದ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಬೇಕು ಎಂದು ಈ ಹಿಂದೆ ನಾವೇ ಹೋರಾಟ ಮಾಡಿದ್ದೆವು. ಮಹಾರಾಷ್ಟ್ರದಲ್ಲಿ ಕೋವಿಡ್ ಆತಂಕ ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಅಧಿವೇಶನಕ್ಕೆ ಸಾವಿರಾರು ಜನ ಆಗಮಿಸುತ್ತಾರೆ. ಈಗಾಗಲೇ ಕೋವಿಡ್ ಭಯ ಇರುವುದರಿಂದ ಸರ್ಕಾರ ಯೋಚಿಸಿ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಅಧೀವೇಶನ ನಡೆಸಬೇಕು ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ ರದ್ದುಪಡಿಸಲು ಸಚಿವಾಲಯ ನೌಕರರ ಸಂಘ ಮನವಿ
ಬೆಳಗಾವಿ ಬದಲಾಗಿ ಚಳಿಗಾಲದ ಅಧಿವೇಶನವನ್ನು ಈ ಬಾರಿ ಬೆಂಗಳೂರಿನಲ್ಲಿಯೇ ನಡೆಸುವುದು ಸೂಕ್ತವಾಗಿದೆ. ಸರ್ಕಾರ ಈ ಬಗ್ಗೆ ಪರಾಮರ್ಶೆ ಮಾಡಿ, ರಾಜಧಾನಿಯಲ್ಲಿಯೇ ಅಧಿವೇಶನಕ್ಕೆ ಚಿಂತನೆ ನಡೆಸಲಿ. ಆದರೆ, ಅಧಿವೇಶನವನ್ನು ಮುಂದೆ ಹಾಕುವುದು ಸೂಕ್ತವಲ್ಲ ಎಂದು ದೇಶಪಾಂಡೆ ತಿಳಿಸಿದರು.