ಶಿರಸಿ: ಬಣ್ಣದ ಬದುಕನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಾಟಕ ಕಲಾವಿದರ ಬದುಕು ಕೋವಿಡ್-19ನಿಂದಾಗಿ ಬೀದಿಗೆ ಬಿದ್ದಿದೆ. ಕಳೆದ 7-8 ತಿಂಗಳಿನಿಂದ ಯಾವುದೇ ಕೆಲಸವಿಲ್ಲದೆ, ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ.
ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಯಾದ ಶಿರಸಿಯ ಮಾರಿಕಾಂಬಾ ಜಾತ್ರೆಗಾಗಿ 5 ನಾಟಕ ಕಂಪನಿಗಳು ಹಾಗೂ 1 ಸರ್ಕಸ್ ತಂಡ ದೂರದ ಊರುಗಳಿಂದ ಆಗಮಿಸಿದ್ದವು. ಜಾತ್ರೆ ಪ್ರಾರಂಭವಾಗೋ ಸುಮಾರು 1 ತಿಂಗಳ ಮುಂಚೆ ಬಂದ ಕಂಪನಿಗಳು ಕೆಲವು ಪ್ರದರ್ಶನಗಳನ್ನ ನೀಡಿದ್ದವು.
ಅದ್ರೆ ಅದೇ ಸಮಯಕ್ಕೆ ಕೊರೊನಾ ಒಕ್ಕರಿಸಿದ್ದರಿಂದ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಯಿತು. ಇದರಿಂದ ಅನಿವಾರ್ಯವಾಗಿ ಕಳೆದ 8 ತಿಂಗಳುಗಳಿಂದ ನಾಟಕ ಕಂಪನಿಗಳು ಶಿರಸಿಯಲ್ಲೇ ಉಳಿದಿವೆ. ಇದು ಬರಿಯ ಒಂದೆರಡು ಕಂಪನಿಗಳ ಮಾತಲ್ಲ. ರಾಜ್ಯದಲ್ಲಿರೋ ಎಲ್ಲಾ ನಾಟಕ ಕಂಪನಿಗಳು ಕೂಡ ಕೋವಿಡ್ ಕರಾಳತೆಗೆ ನಲುಗಿ ಹೋಗಿವೆ.
ಲಾಕ್ಡೌನ್ನಲ್ಲಿ ಸಿಲುಕಿ ಊಟಕ್ಕೂ ಪರದಾಡುತ್ತಿದ್ದ ಕಲಾವಿದರನ್ನು ಕಂಡು ಶಿರಸಿಯ ಅನೇಕ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬಂದು ಆಹಾರ ನೀಡಿದ್ವು. ನಾವು ಕಳೆದ 8 ತಿಂಗಳು ಬದುಕಿನ ಬಹುದೊಡ್ಡ ಪಾಠವನ್ನು ಕಲಿಸಿತು ಅಂತಾರೆ ಕಲಾವಿದರು.
ಸದ್ಯ ಕೊರೊನಾ ನಿಧಾನವಾಗಿ ಕಡಿಮೆ ಆಗತೊಡಗಿದೆ. ಹಲವಾರು ಸಿನಿಮಾ ಪ್ರದರ್ಶನಗಳಿಗೆ ಅವಕಾಶ ಕೂಡ ನೀಡಲಾಗಿದೆ. ನಾಟಕ ಪ್ರದರ್ಶನಗಳು ಕೂಡ ಅಲ್ಲಲ್ಲಿ ಪ್ರಾರಂಭವಾಗುತ್ತಿವೆ. ನಮಗೂ ಕೂಡ ಆದಷ್ಟು ಬೇಗ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಒಳ್ಳೆಯದು ಎನ್ನುವುದು ಕಲಾವಿದರ ಮಾತು.