ಶಿರಸಿ: ಕಳೆದ ಒಂದು ವಾರದ ಹಿಂದೆ ಬೈಕ್ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ವೈದ್ಯರ ಯಡವಟ್ಟಿನಿಂದ ಸಾವಿಗೀಡಾಗಿದ್ದಾನೆ ಎಂದು ಪೋಷಕರು ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಈ ಘಟನೆ ನಡೆದಿದೆ.
ಶಿರಸಿಯ ಉಂಚಳ್ಳಿ ಗ್ರಾಮದ ಸಂತೋಷ್ ನಾಯ್ಕ ಮೃತ ದುರ್ದೈವಿ. ಈತ ಒಂದು ವಾರದ ಹಿಂದೆ ಬೈಕ್ನಿಂದ ಬಿದ್ದು ಗಾಯಗೊಂಡಿದ್ದ. ಗಾಯಗೊಂಡ ಯುವಕನನ್ನ ಶಿರಸಿಯ ಶ್ರೀ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಚೆನ್ನಾಗಿಯೆ ಮಾತನಾಡುತ್ತಿದ್ದ ಯುವಕನಿಗೆ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ನೀಡಿದ ಕೆಲವೇ ನಿಮಿಷದಲ್ಲಿ ಉಸಿರಾಟದಲ್ಲಿ ತೊಂದರೆಯಾಗಿ ಯುವಕ ಆಸ್ಪತ್ರೆಯಲ್ಲೆ ಸಾವು ಕಂಡಿದ್ದಾನೆ ಎನ್ನುವುದು ಪೋಷಕರ ಆರೋಪವಾಗಿದೆ.
ಚೆನ್ನಾಗಿಯೇ ಮಾತನಾಡುತ್ತಿದ್ದ ಯುವಕ ಸಾವನ್ನಪ್ಪಿದ ಸುದ್ದಿ ಕೇಳಿದ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.