ಕಾರವಾರ(ಉತ್ತರ ಕನ್ನಡ): ಪ್ರವಾಸಿಗರ ಪಾಲಿಗೆ ಸಮುದ್ರದಾಳದ ಚಿತ್ರ-ವಿಚಿತ್ರ ಜಲಚರಗಳ ವಿಸ್ಮಯ ಲೋಕ ತೆರೆದಿಡುತ್ತಿದ್ದ ಪ್ರಮುಖ ಪ್ರವಾಸಿ ಕೇಂದ್ರ ಇದೀಗ ಪಾಳುಬಿದ್ದು ಕುಡುಕರ ಅಡ್ಡೆಯಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಗೊಂಡ ಕಾರಣಕ್ಕೆ ಕಳೆದ ಕೆಲವು ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಮತ್ಸ್ಯಾಲಯ ಈಗ ಯಾರಿಗೂ ಬೇಡವಾಗಿದೆ. ಕಟ್ಟಡದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಸಿಗರೇಟ್ ತುಂಡುಗಳೇ ತುಂಬಿಕೊಂಡಿದ್ದು, ಇಲ್ಲಿರುವ ಬೆಲೆಬಾಳುವ ವಸ್ತುಗಳು, ಸಾಮಗ್ರಿಗಳು ತುಕ್ಕು ಹಿಡಿಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಕಾರವಾರದಲ್ಲಿ ಕಡಲತೀರದುದ್ದಕ್ಕೂ ಸಿಗುವ ಪ್ರವಾಸಿ ತಾಣಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಇದೇ ಕಾರಣಕ್ಕೆ ನಿತ್ಯವೂ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಂತೆ ಒಂದು ಕಾಲದಲ್ಲಿ ಪ್ರವಾಸಿಗರ ಪಾಲಿಗೆ ಕಡಲಾಳದ ಜೀವಿಗಳ ದರ್ಶನ ತೆರೆದಿಟ್ಟು ಜ್ಞಾನದೇಗುಲದಂತಿದ್ದ ಸಾಗರ ಮತ್ಸ್ಯಾಲಯ ಕಟ್ಟಡ ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದು, ಫಿಶ್ ಅಕ್ವೇರಿಯಂಗಳನ್ನು ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ದಶಕಗಳ ಕಾಲ ಪ್ರವಾಸಿಗರ ಕಣ್ಮನ ಸೆಳೆದಿದ್ದ ಕೇಂದ್ರವೀಗ ಹಾಳುಕೊಂಪೆಯಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ 2013ರಲ್ಲಿ ಪುನರ್ ನವೀಕರಣಗೊಳಿಸಿದ್ದ ಕಟ್ಟಡ ಐದಾರು ವರ್ಷದಲ್ಲಿಯೇ ಶಿಥಿಲಗೊಂಡು ಕೋವಿಡ್ ಬಳಿಕ ಶಾಶ್ವತವಾಗಿ ಬಾಗಿಲು ಮುಚ್ಚಿದೆ. ಇದರಿಂದ ಸಾಗರ ಮತ್ಸ್ಯಾಲಯ ಕಟ್ಟಡ ಸುತ್ತ ಗಿಡಗಂಟಿಗಳು ಬೆಳೆದಿವೆ. ಕಟ್ಟಡದಲ್ಲಿ ಅಕ್ವೇರಿಯಂ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೆ ಅದೆಷ್ಟೋ ಬೆಲೆಬಾಳುವ ವಸ್ತುಗಳು ಕಟ್ಟಡದೊಳಗೆ ತುಕ್ಕು ಹಿಡಿಯುತ್ತಿದ್ದು, ಉಪಯೋಗಕ್ಕೆ ಬರುವಂತಿದ್ದರೂ ಬೀಗ ಹಾಕಿದ ಕಟ್ಟಡದಲ್ಲಿ ಧೂಳು ಹಿಡಿಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಸದ್ಯ ಮತ್ಸ್ಯಾಲಯವನ್ನು ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮತ್ಸ್ಯಾಲಯದಲ್ಲಿನ ಪಾನಿಸ್ ಕೋಯ್, ಸ್ಮಾಲ್ ಕೋಯ್, ಗೋಲ್ಡನ್ ರೋಸಿ, ಡೈಮಂಡ್ ಆಂಗಲ್, ಗೋಲ್ಡ್ ಫಿಶ್, ಕಾಪರ್ ಗೋಲ್ಡ್, ಅಲ್ಬಿನೊ ಶಾರ್ಕ್, ವೈಟ್ ಮೂಲೀಸ್, ಬ್ಲಾಕ್ ಮಾರ್ಫ್ ಹೀಗೆ 30ಕ್ಕೂ ಹೆಚ್ಚು ವಿಧದ ಮೀನುಗಳು, ಆಮೆಗಳ ಮರಿಗಳೂ ಗಮನ ಸೆಳೆಯುತ್ತಿವೆ. ಅಲ್ಲದೆ ಹಲವು ವರ್ಷಗಳ ಹಿಂದಿನ ತಿಮಿಂಗಿಲದ ಅಸ್ತಿಯನ್ನು ಕೂಡ ಇಲ್ಲಿ ಸಂರಕ್ಷಿಸಿಡಲಾಗಿದ್ದು, ಇದೂ ಕೂಡ ಆಗಮಿಸುವ ಪ್ರವಾಸಿಗರ ಕೌತುಕ ಹೆಚ್ಚಿಸುವಂತಾಗಿದೆ.
ಆದರೆ ಸಾಗರ ಮತ್ಸ್ಯಾಲಯ ಕಡಲತೀರಗಳ ಪ್ರವಾಸಿ ತಾಣಗಳ ಸಾಲಿನಲ್ಲಿ ಸೇರಿರುವುದರಿಂದ, ಈ ಹಿಂದೆ ಬಂದವರು ಮತ್ತೆ ಮತ್ತೆ ಹುಡುಕಿ ಬರುತ್ತಿದ್ದಾರೆ. ಜಿಲ್ಲಾಡಳಿತ ಇಲ್ಲವೇ ಪ್ರವಾಸೋದ್ಯಮ ಇಲಾಖೆ ಕಟ್ಟಡ ಪುನರ್‌ಬಳಕೆಗೆ ಯೋಗ್ಯವಾಗಿದ್ದಲ್ಲಿ ಬಳಕೆ ಮಾಡಬೇಕು. ಇಲ್ಲವೇ ಇದನ್ನು ಪುನರ್‌ನಿರ್ಮಾಣ ಮಾಡಿ ಮೊದಲಿನಂತೆ ಪ್ರವಾಸಿಗರಿಗೆ ಸಾಗರಜೀವಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಿರಂತರ ಮಳೆಗೆ ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ: ಆತಂಕದಲ್ಲಿ ಮಕ್ಕಳು