ಕಾರವಾರ: ರಾಜ್ಯದಲ್ಲಿಯೇ ಶಿವನ ಆತ್ಮಲಿಂಗವಿರುವ ಏಕೈಕ ದೇವಾಲಯ ಇರುವುದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ಮಹಾಬಲೇಶ್ವರ ದೇವಾಲಯಕ್ಕೆ ರಾಜ್ಯ ಸೇರಿದಂತೆ ದೇಶದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಸದ್ಯ ಕೊರೊನಾ ನಿಯಮ ಸಡಿಲಿಕೆಗೊಳಿಸಿ ದೇವರ ದರ್ಶನಕ್ಕೆ ಅವಕಾಶ ಒದಗಿಸಿದ್ದು, ಭಕ್ತರು ಆಗಮಿಸುತ್ತಿದ್ದಾರೆ.
ಆದರೆ, ಸದ್ಯ ಸುಪ್ರೀಂ ಸುಪರ್ದಿಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಸ್ಥಳೀಯ ಉಪಾಧಿವಂತರ ನಡುವಿನ ಗಲಾಟೆಯ ಪರಿಣಾಮ ಭಕ್ತರಿಗೆ ಆತ್ಮಲಿಂಗದ ದರ್ಶನ ಇಲ್ಲದಂತಾಗಿದೆ.
ಕೊರೊನಾ ಮಾರ್ಗಸೂಚಿಗಳೊಂದಿಗೆ ಮಹಾಬಲೇಶ್ವರನ ದರ್ಶನ:
ರಾಜ್ಯದಲ್ಲಿ ಕೊರೊನಾ ಕಠಿಣ ನಿಯಮಗಳ ಸಡಿಲಿಕೆಯೊಂದಿಗೆ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಈ ಹಿನ್ನೆಲೆ ದಕ್ಷಿಣಕಾಶಿ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಹ ಭಕ್ತರಿಗೆ ತೆರೆದುಕೊಂಡಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ದೇವಸ್ಥಾನದಲ್ಲಿ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲವಾಗಿದ್ದು, ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಉಪಾಧಿವಂತರ ನಡುವಿನ ಪೂಜಾ ಹಕ್ಕಿನ ಗಲಾಟೆ:
ಆದರೆ ಇದೀಗ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದ ಉಪಾಧಿವಂತರ ನಡುವಿನ ಪೂಜಾ ಹಕ್ಕಿನ ಗಲಾಟೆಯಿಂದ ದೇವಸ್ಥಾನ ಮತ್ತೆ ವಿವಾದದ ಕೇಂದ್ರ ಬಿಂದುವಾಗುವಂತಾಗಿದೆ.
ಪೂಜಾ ಹಕ್ಕಿನ ಕುರಿತು ವಾಗ್ವಾದ:
ಲಾಕ್ಡೌನ್ ಅವಧಿಯಲ್ಲಿ ಸುಪ್ರೀಂಕೋರ್ಟ್ ನೇತೃತ್ವದ ಸಮಿತಿಯ ಆಡಳಿತದಲ್ಲಿರುವ ದೇವಸ್ಥಾನದಲ್ಲಿ ಶಿವರಾತ್ರಿ, ಶ್ರಾವಣ ಮಾಸದಂತಹ ವಿಶೇಷ ಸಂದರ್ಭಗಳಲ್ಲಿ ಉಪಾಧಿವಂತರಿಗೆ ದೇವಸ್ಥಾನಕ್ಕೆ ಆಗಮಿಸಿ ನಿಗಧಿತ ಸಮಯದಲ್ಲಿ ವೈಯಕ್ತಿಕ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಆದರೆ, ಇದೇ ವಿಚಾರವಾಗಿ ಇದೀಗ ಉಪಾಧಿವಂತರು ಹಾಗೂ ದೇವಸ್ಥಾನ ಸಮಿತಿ ನಡುವೆ ಪೂಜಾ ಹಕ್ಕಿನ ಕುರಿತು ವಾಗ್ವಾದ ಏರ್ಪಟ್ಟಿದ್ದು, ದೇವಸ್ಥಾನಲ್ಲಿ ಗಲಾಟೆಗೆ ಕಾರಣವಾಯ್ತು.
ಉಪವಿಭಾಗಾಧಿಕಾರಿ ಆದೇಶ?
ಈ ಹಿನ್ನೆಲೆ ಸದ್ಯ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಯಾರಿಗೂ ಅವಕಾಶ ನೀಡದಂತೆ ಸಮಿತಿ ಅಧ್ಯಕ್ಷತೆ ವಹಿಸಿರುವ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಆದೇಶಿಸಿದ್ದಾರೆ. ಇದರಿಂದಾಗಿ ಭಕ್ತರಿಗೂ ಸಹ ಆತ್ಮಲಿಂಗದ ದರ್ಶನ ಇಲ್ಲದಂತಾಗಿದೆ.
ಸುಪ್ರೀಂ ಸುಪರ್ದಿಯಲ್ಲಿ ದೇವಸ್ಥಾನ:
ಈ ಹಿಂದೆ ಸರ್ಕಾರದ ಸುಪರ್ದಿಯಲ್ಲಿದ್ದ ಮಹಾಬಲೇಶ್ವರ ದೇವಸ್ಥಾನವನ್ನ 2007ರಲ್ಲಿ ಶ್ರೀ ರಾಮಚಂದ್ರಾಪುರ ಮಠದ ಆಡಳಿತಕ್ಕೆ ನೀಡಲಾಗಿತ್ತು. ಇದಾದ ಬಳಿಕ ಹಿಂದಿನಿಂದ ದೇವರಿಗೆ ಪೂಜೆ ಸಲ್ಲಿಸಿಕೊಂಡು ಬಂದಿದ್ದ ಅನುವಂಶೀಯ ಉಪಾಧಿವಂತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ ಹಿನ್ನೆಲೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನ ಸಲ್ಲಿಸಲಾಗಿತ್ತು.
ಈ ಕುರಿತು ಆದೇಶ ನೀಡಿರುವ ಸುಪ್ರೀಂಕೋರ್ಟ್ 2021ರ ಮೇ ತಿಂಗಳಿನಲ್ಲಿ ದೇವಸ್ಥಾನವನ್ನ ಮಠದ ಆಡಳಿತದಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಮಠದ ಆಡಳಿತದ ಪೂರ್ವದಲ್ಲಿದ್ದ ಪೂಜಾ ವಿಧಾನಗಳನ್ನು ಮುಂದುವರೆಸುವಂತೆ ಆದೇಶಿಸಿ ಆಡಳಿತ ಸಮಿತಿಯೊಂದನ್ನು ರಚನೆ ಮಾಡಿತ್ತು.
ಆದರೆ, ಸಮಿತಿಯಲ್ಲಿನ ಕೆಲ ಮಠದ ಸದಸ್ಯರು ಅನುವಂಶೀಯ ಉಪಾಧಿವಂತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವುದಕ್ಕೆ ನಿರಾಕರಣ ಮಾಡಿದ್ದರಿಂದಾಗಿ ಗೊಂದಲ ಉಂಟಾಗಿದೆ.
ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಜನ ಕೇಂದ್ರ ಸ್ಥಾಪಿಸುವ ವಿಚಾರ: ವಿದ್ಯಾರ್ಥಿಗಳ ಮನವಿ ವಜಾಗೊಳಿಸಿದ ಹೈಕೋರ್ಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಈಗಾಗಲೇ ಯಾವುದೇ ರೀತಿಯ ಗೊಂದಲ ಮಾಡದಂತೆ ಸಮಿತಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ.
ಅಪ್ಪ - ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಉಪಾಧಿವಂತರು ಹಾಗೂ ಸಮಿತಿ ನಡುವಿನ ಗೊಂದಲದಿಂದಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪರದಾಡುವಂತಾಗಿರೋದು ಮಾತ್ರ ಸುಳ್ಳಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಭಕ್ತರ ದರ್ಶನಕ್ಕೆ ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.