ಭಟ್ಕಳ(ಉತ್ತರ ಕನ್ನಡ): ಇಲ್ಲಿನ ರಿಬ್ಕೋ ಸಂಸ್ಥೆಯ ಮಾಲೀಕರ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ರಿಬ್ಕೋ ಸಂಸ್ಥೆಯ ಮಾಲೀಕರರಾದ ಎಸ್ ಎ. ರೆಹಮಾನ್ ಮನೆಯಲ್ಲಿ ಕಳ್ಳತನ ನಡೆದಿದ್ದು, ರಾಜ್ಯದ ಹಲವೆಡೆ ಇವರ ಸಂಸ್ಥೆಯ ಬ್ರಾಂಚ್ಗಳು ಇರುವುದರಿಂದ ತಿಂಗಳಲ್ಲಿ 15 ದಿನಗಳ ಕಾಲ ಇವರು ಬೇರೆಡೆ ಇರುತ್ತಾರೆ.
ಕೆಲಸದ ಹಿನ್ನೆಲೆಯಲ್ಲಿ ಜೂ.21 ರಂದು ಮನೆಯ ಮಾಲೀಕ ಬೆಂಗಳೂರಿಗೆ ತೆರಳಿದ್ದರು. ಇಂದು ಅವರ ಕಾರು ಚಾಲಕ ಮನೆಯನ್ನು ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಸುಮಾರು 7 ಲಕ್ಷದಷ್ಟು ಭಾರತೀಯ ಕರೆನ್ಸಿ, ಹಾಗೂ 4 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, 110 ಗ್ರಾಂ ಚಿನ್ನವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ, ಪಿಎಸ್ಐ ಶ್ರೀಧರ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವು ಸಂಬಂಧ ಗ್ರಾಮೀಣ ಠಾಣೆಯಲ್ಲಿ ಮನೆಯ ಮಾಲೀಕರ ಪುತ್ರ ಮಹಮ್ಮದ್ ರೂಮೇಜ್ ಶಾಬಂದ್ರಿ ದೂರು ನೀಡಿದ್ದಾರೆ.
ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ: ಮತ್ತೊಂದೆಡೆ ಟ್ರಕ್‌ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಹೊನ್ನಾವರದ ಕವಲಕ್ಕಿ ಬಳಿ ಪೊಲೀಸರು ಟ್ರಕ್ ತಡೆದು ಜಾನುವಾರುಗಳನ್ನು ರಕ್ಷಣೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆ ಹಾನಗಲ್ ಮೂಲದ ಇಸ್ಮಾಯಿಲ್ ಖಾದರ್ ಸಾಬ್, ಮಹಾರಾಷ್ಟ್ರದ ಭೂಷಣನಗರ ನಿವಾಸಿ ಸಂಕೇತ ಬಲಿದ್ ಎಂದು ಗುರುತಿಸಲಾಗಿದೆ.
ಇವರು ಯಾವುದೇ ಅನುಮತಿ ಪತ್ರವಿಲ್ಲದೇ ಹಿಂಸಾತ್ಮಕವಾಗಿ 22ಕ್ಕೂ ಅಧಿಕ ಜಾನುವಾರುಗಳನ್ನು ಹಾವೇರಿಯಿಂದ ಗೇರುಸೊಪ್ಪ ಮಾರ್ಗವಾಗಿ ಭಟ್ಕಳಕ್ಕೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೊನ್ನಾವರ ಪೊಲೀಸರು ಕವಲಕ್ಕಿ ಬಳಿ ಟ್ರಕ್ ತಡೆದ ಜಾನುವಾರುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿ ವಿಚಾರ: ನಡು ರಸ್ತೆಯಲ್ಲೇ ಪ್ರಿಯಕರನಿಗೆ ಚಾಕುವಿನಿಂದ ಇರಿದ ಯುವತಿ!
44 ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಅಪ್ರಾಪ್ತರ ಬಂಧನ: ನಕಲಿ ಕೀ ಬಳಸಿ ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಬೆಂಗಳೂರಿನ ಜೆ.ಪಿ. ನಗರ ಪೊಲೀಸರು ಬಂಧಿಸಿದ್ದು, ಅವರಿಂದ ಬರೋಬ್ಬರಿ 44 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ವರುಣ್ ಎಂಬುವರು ನೀಡಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ ಅಪ್ರಾಪ್ತರ ಕೈಚಳಕ ಬೆಳಕಿಗೆ ಬಂದಿದೆ.
ಬಾಲಕರ ಬಂಧನದಿಂದ ಜೆ.ಪಿ. ನಗರ, ಜಯನಗರ, ಅವಲಹಳ್ಳಿ, ತಿಲಕ್ ನಗರ, ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ತಲಾ ಒಂದೊಂದು ಪ್ರಕರಣಗಳು ಹಾಗೂ ಬನಶಂಕರಿ, ಮೈಕೋ ಲೇಔಟ್, ಬೆಳ್ಳಂದೂರು, ಎಚ್ಎಸ್ಆರ್ ಪೊಲೀಸ್ ಠಾಣೆಗಳ ತಲಾ ಎರಡು ಪ್ರಕರಣಗಳು ಹಾಗೂ ಎಚ್ಎಎಲ್, ಕೆ.ಆರ್.ಪುರಂ ಪೊಲೀಸ್ ಠಾಣೆಗಳ ತಲಾ ಐದು ಪ್ರಕರಣಗಳು ಅಲ್ಲದೇ, ಕಾಡುಗೋಡಿ ಪೊಲೀಸ್ ಠಾಣೆಯ ಆರು ಪ್ರಕರಣಗಳು ಸೇರಿದಂತೆ ಒಟ್ಟು 29 ಪ್ರಕರಣಗಳು ಪತ್ತೆಯಾಗಿವೆ ಎಂದು ಜೆ.ಪಿ. ನಗರ ಪೊಲೀಸರು ತಿಳಿಸಿದ್ದಾರೆ.