ಕಾರವಾರ: ಭೂಕುಸಿತದಿಂದಾಗಿ ಹಾನಿಗೊಳಗಾಗಿರುವ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆದುರು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಅತ್ತು ಗೋಗರೆದ ಘಟನೆ ನಡೆಯಿತು.
ಪ್ರವಾಹದಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿರುವ ಯಲ್ಲಾಪುರ ಕಳಚೆ ಗ್ರಾಮಕ್ಕೆ ಸಿಎಂ ಭೇಟಿ ನೀಡಿದರು. ಈ ವೇಳೆ ಅಳಲು ತೋಡಿಕೊಂಡ ಸಂತ್ರಸ್ತರು, ಗುಡ್ಡ ಕುಸಿತದಿಂದ ಮನೆಗಳಿಗೆ ಸಂಪೂರ್ಣ ಹಾನಿಯಾಗಿರುವ ಬಗ್ಗೆ ದೂರು ಹೇಳಿಕೊಂಡು ಕಣ್ಣೀರಿಟ್ಟರು. ಇದೇ ವೇಳೆ ವಿದ್ಯಾರ್ಥಿಗಳು ಕೂಡ ಸಮಸ್ಯೆ ಹೇಳಿಕೊಂಡು ಕಣ್ಣೀರಾದರು.
ಮನೆ ಇಲ್ಲದೆ ಅಲ್ಲಿಲ್ಲಿ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದೇವೆ. ಇದೀಗ ಮತ್ತೆ ಗುಡ್ಡ ಕುಸಿತವಾಗುವ ಭೀತಿ ಇದೆ. ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ನಮಗೆ ಶಾಲಾ, ಕಾಲೇಜುಗಳಿಗೂ ತೆರಳಲು ಕೂಡಾ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎದುರು ಹೇಳಿಕೊಂಡ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಳಿಕ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು, ಪರಿಹಾರದ ಭರವಸೆ ನೀಡಿದ್ದಾರೆ. ಕಾಳಿ ಹಾಗೂ ಗಂಗಾವಳಿ ಕಣಿವೆ ಪ್ರದೇಶಗಳಲ್ಲಿ ಕಂಡರಿಯದ ರೀತಿ ಭೂಕುಸಿತವಾಗಿದೆ. ಇದರಿಂದ ಮನೆ ಜಮೀನು ಸೇರಿ ಎಲ್ಲವೂ ನಾಶವಾಗಿದೆ. ಅಂದಾಜಿನ ಪ್ರಕಾರ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಹತ್ತಾರು ಎಕರೆ ಕೃಷಿ ಭೂಮಿ ಹಾನಿಯಾಗಿದೆ. ಸದ್ಯ ಗ್ರಾಮಕ್ಕೆ ಸಂಪರ್ಕವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಬೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ.
ಪರಿಹಾರ ಒದಗಿಸುವ ಭರವಸೆ
ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲೆಯ ಯಲ್ಲಾಪುರ ತಾಲೂಕಿನ ವಿವಿಧ ಸ್ಥಳಗಳ ಮಾಹಿತಿ ಪಡೆದು, ಪರಿಹಾರ ಒದಗಿಸುವ ಭರವಸೆ ನೀಡಿದರು.
ಯಲ್ಲಾಪುರ ತಾಲೂಕಿನ ತಳಕೆಬೈಲ್, ಅರಬೈಲ್ ಪ್ರದೇಶಕ್ಕೆ ಕೊಚ್ಚಿಹೋದ ಗುಳ್ಳಾಪುರ ಸೇತುವೆಗೆ ಭೇಟಿ ನೀಡಿ ಹಾನಿ ಪ್ರಮಾಣ ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯಿಂದ ಹಾನಿಯುಂಟಾದ ಸ್ಥಳಗಳ ಮಾಹಿತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದು, ನಷ್ಟದ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದೇನೆ. ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಬಳಿ ಅಗತ್ಯ ಹಣವಿದೆ. ಹಾನಿಯ ನಿಖರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು ಕೇಳುವ ಕುರಿತು ಚಿಂತಿಸುತ್ತೇವೆ ಎಂದರು.
ಪಶ್ಚಿಮ ಘಟ್ಟ ಪ್ರದೇಶ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು, ಅಲ್ಲಿ ಪದೇ ಪದೆ ಕುಸಿತ ಉಂಟಾಗಿದೆ. ಇದರಿಂದ ಇಲ್ಲಿಗೆ ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿ ಸ್ಥಳ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಅದಕ್ಕೂ ಮುನ್ನ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟಿಸಿದರು. ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಇತರರು ಇದ್ದರು.
ಇದನ್ನೂ ಓದಿ: ದಾಸರಹಳ್ಳಿ ಕ್ಷೇತ್ರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ: ಸರ್ಕಾರಕ್ಕೆ ಹೈಕೋರ್ಟ್ ತಾಕೀತು