ಕಾರವಾರ: ಅದು ಸುತ್ತಲಿನ ಹತ್ತು ಹಳ್ಳಿಗಳಿಗೆ ಆಸರೆಯಾಗಿದ್ದ ಕೆರೆ. ಆ ಕೆರೆಯಿಂದಾಗಿ ಹಲವು ಬಾವಿಗಳ ಅಂತರ್ಜಲ ಮಟ್ಟ ಕಾಯ್ದಿರುವುದರ ಜೊತೆಗೆ ಅಲ್ಲಿನ ಜನ, ಜಾನುವಾರು, ಹೊಲಗದ್ದೆಗಳಿಗೆ ಅದೇ ನೀರನ್ನ ಬಳಕೆ ಮಾಡುತ್ತಿದ್ದರು. ಜೊತೆಗೆ ಮೀನು ಸಾಕಣೆ ಕೂಡ ಈ ಕೆರೆಯಲ್ಲೇ ಮಾಡಲಾಗುತ್ತಿತ್ತು. ಆದರೆ, ಊರಿನ ಜೀವ ಜಲವಾಗಿದ್ದ ಈ ಕೆರೆ ಪ್ರಸ್ತುತ ವಿಷಕಾರಿಯಾಗಿ ಬದಲಾಗಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಹೊಸಳ್ಳಿ ಕೆರೆ ಸಂಪೂರ್ಣ ವಿಷಕಾರಿಯಾಗಿ ಮಾರ್ಪಾಡಾಗಿದೆ. ಐಸ್‌ಕ್ರೀಂ ತಯಾರಿಕಾ ಕಂಪನಿ ಹಾಗೂ ಹಾಲು ಉತ್ಪನ್ನಗಳ ತಯಾರಿಕಾ ಕಂಪನಿಗಳಿಂದ ಬಿಡುಗಡೆಯಾಗುತ್ತಿರುವ ಕೆಮಿಕಲ್ ಮಿಶ್ರಿತ ನೀರು ಹಾಗೂ ತ್ಯಾಜ್ಯದ ನೀರು ನೇರವಾಗಿ ಹೊಸಳ್ಳಿ ಕೆರೆಗೆ ಸೇರುವುದರಿಂದ ಸಂಪೂರ್ಣ ವಿಷವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಗೆ ಸೇರುತ್ತಿರುವ ರಾಸಾಯನಿಕ ತ್ಯಾಜ್ಯದಿಂದಾಗಿ ಹೊಸಳ್ಳಿ ಕೆರೆಯ ಬಳಿ ಸುಳಿಯಲು ಕೂಡ ಸಾಧ್ಯವಾಗದ ರೀತಿಯಲ್ಲಿ ದುರ್ವಾಸನೆ ಬರುತ್ತಿದ್ದು, ಕಿರುವತ್ತಿಯ ಜನರು ಇದರಿಂದ ಸಾಕಷ್ಟು ರೋಸಿ ಹೋಗಿದ್ದಾರೆ. ಸ್ಥಳೀಯರ ಒತ್ತಾಯದ ಮೇರೆಗೆ ಯಲ್ಲಾಪುರ ತಾಲೂಕು ಆರೋಗ್ಯ ಅಧಿಕಾರಿಯ ಮೂಲಕ ನೀರು ಪರೀಕ್ಷೆ ಮಾಡಲಾಗಿದ್ದು, ಕೆರೆಯ ನೀರಿನ ಪಿಎಚ್ ಪ್ರಮಾಣ ಹೆಚ್ಚಿದೆ. ಪ್ರತಿ 100 ಎಂಎಲ್ ನೀರಿನಲ್ಲಿ 1,800 ಪ್ರಮಾಣದಷ್ಟು ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮುಂದಿನ 12 ಗಂಟೆಯಲ್ಲಿ ತೀವ್ರತೆ ಪಡೆದುಕೊಳ್ಳಲಿದೆ ಅಸನಿ ಚಂಡಮಾರುತ.. ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆ!
ಕೆರೆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಮಾತ್ರವಲ್ಲದೇ, ಇದರಿಂದಾಗಿ ಅಂತರ್ಜಲಮಟ್ಟ ಕೂಡ ವಿಷವಾಗುತ್ತಿದೆ ಎಂಬ ಅಂಶ ಆತಂಕ ಮೂಡಿಸಿದೆ. ಇನ್ನು ಈ ಕೆರೆಯಲ್ಲಿ ಸ್ಥಳೀಯರು ಮೀನು ಸಾಕಣಿಕೆ ಮಾಡುತ್ತಿದ್ದು, ಆ ಮೀನುಗಳನ್ನು ಸೇವಿಸುವುದರಿಂದ ರೋಗಗಳು ಹರಡಬಹುದು ಎಂಬ ಭೀತಿ ಎದುರಾಗಿದೆ. ಆದರೆ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾರೊಬ್ಬರು ಇತ್ತ ಗಮನಹರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಹೊಸಳ್ಳಿ ಕೆರೆಯು ಸುಮಾರು 28 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಸುತ್ತಲಿನ ಹಳ್ಳಿಯ ಜನರಿಗೆ ಉಪಯೋಗವಾಗುತ್ತಿತ್ತು. ಕೆರೆ ನೀರನ್ನು ಕುಡಿಯಲು, ದಿನ ಬಳಕೆಗೆ, ಹೊಲಗದ್ದೆಗಳಿಗೆ ಹಾಗೂ ಜಾನುವಾರುಗಳಿಗಾಗಿ ಜನರು ಬಳಕೆ ಮಾಡುತ್ತಿದ್ದರು. ಯಾವಾಗ ಈ ಖಾಸಗಿ ಕಾರ್ಖಾನೆಯಿಂದ ಕೆಮಿಕಲ್ ಮಿಶ್ರಿತ ನೀರು ಹಾಗೂ ಸ್ಥಳೀಯರಿಂದ ತ್ಯಾಜ್ಯ ಮಿಶ್ರಿತ ನೀರು ಈ ಕೆರೆಗೆ ಬರಲು ಪ್ರಾರಂಭವಾಯ್ತೋ ಅಂದಿನಿಂದ ಈ ಕೆರೆ ನೀರನ್ನು ಜನರು ಉಪಯೋಗಿಸುವುದನ್ನೇ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಹಾವೇರಿಯ ಸ್ವಗ್ರಾಮದಲ್ಲಿ ವಿದ್ಯಾರ್ಥಿ ನವೀನ್ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ
ಕೆರೆಯ ಸುತ್ತಲೂ ಹಚ್ಚಹಸಿರಿನ ಹುಲ್ಲು ಬೆಳೆದಿರುವುದರಿಂದ ದನ - ಕರುಗಳು ಮೇಯಲು ಇಲ್ಲಿಗೆ ಬರುತ್ತವೆ. ಹುಲ್ಲು ತಿಂದ ಬಳಿಕ ಇದೇ ಕೆರೆಯ ನೀರನ್ನು ಕುಡಿಯುತ್ತವೆ. ಇದರಿಂದಾಗಿ ಜಾನುವಾರಗಳು ಕೂಡ ರೋಗಗಳಿಗೆ ತುತ್ತಾಗುತ್ತಿವೆ. ಅಷ್ಟೇ ಅಲ್ಲದೆ ಈ ನೀರನ್ನ ಜನ ಮುಟ್ಟಿದ್ರೆ ಸಾಕು ತುರಿಕೆ, ಕಜ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ಗ್ರಾಮಸ್ಥರ ಅಳಲು. ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಅವರನ್ನು ಕೇಳಿದರೆ, ಇದುವರೆಗೆ ಈ ಕೆರೆಯ ಬಗ್ಗೆ ಯಾವುದೇ ದೂರುಗಳು ಬಂದಿರಲಿಲ್ಲ. ನೀರಾವರಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನ ಸ್ಥಳಕ್ಕೆ ಕಳುಹಿಸಿ ಪರೀಕ್ಷೆ ನಡೆಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನರಿಗೆ ಬಳಕೆಯಾಗಬೇಕಿದ್ದ ಕೆರೆ ನೀರು ಖಾಸಗಿ ಕೈಗಾರಿಕೆಯ ತ್ಯಾಜ್ಯದಿಂದಾಗಿ ಕಲುಷಿತಗೊಂಡು ಹಾಳಾಗುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆಯನ್ನ ಬಳಕೆಗೆ ಯೋಗ್ಯ ಮಾಡಬೇಕಿದೆ.
ಇದನ್ನೂ ಓದಿ: ಮಾ.24ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ.. 25ರಂದು ಯೋಗಿ ಆದಿತ್ಯನಾಥ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ