ಭಟ್ಕಳ: ಎದುರಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. ಈ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತಾಲೂಕಿನ ಕಸಲಗದ್ದೆ ಸಮೀಪ ಈ ಘಟನೆ ಸಂಭವಿಸಿದೆ. ಸಾಗರದಿಂದ ಕುಂದಾಪುರ ಕಡೆಗೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ ಸಾಗರ ರಸ್ತೆಯ ಕಸಲಗದ್ದೆ ಕ್ರಾಸ್ ಸಮೀಪ ಎದುರಿನಿಂದ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಹೋಗಿದ್ದರಿಂದ ಬಸ್ ರಸ್ತೆಯಿಂದ ಕೆಳಗಿಳಿದು ಪಲ್ಟಿಯಾಗುವ ಹಂತ ತಲುಪಿತ್ತು. ಈ ವೇಳೆ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆಯಿಂದ ಕೆಳಗಿಳಿದ ಬಸ್ಸನ್ನು ತನ್ನ ನಿಯಂತ್ರಣಕ್ಕೆ ಪಡೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.
ಸಾಕಷ್ಟು ಪ್ರಯಾಣಿಕರಿದ್ದ ಹಿನ್ನೆಲೆ ಕೆಳಗಿಳಿದ ಬಸ್ಸಿನ ಚಕ್ರ ಮಣ್ಣಿನಲ್ಲಿ ಹೂತು ಹೋಗಿತ್ತು.ಇನ್ನೇನು 3-4 ಕಿ.ಮೀ ಕ್ರಮಿಸಿದರೆ ಪ್ರಯಾಣಿಕರು ಭಟ್ಕಳಕ್ಕೆ ತಲುಪುತ್ತಿದ್ದರು. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಪಘಾತಕ್ಕೆ ಕಾರಣವಾದ ಜಿಯೋ ಅಂಡರ್ ಗ್ರೌಂಡ್ ಸಂಪರ್ಕ
ಭಟ್ಕಳದಿಂದ ಸಾಗರ ರಸ್ತೆ ಮಾರ್ಗವಾಗಿ ಮಾರುಕೇರಿಯಲ್ಲಿರುವ ಜಿಯೋ ಟೆಲಿಫೋನ್ ಟವರಿಗೆ ಅಂಡರ್ ಗ್ರೌಂಡ್ ತಂತಿ ಸಂಪರ್ಕ ಸಲುವಾಗಿ ರಸ್ತೆ ಬದಿ ಹೊಂಡ ತೆಗೆಯಲಾಗಿದೆ. ಹೊಂಡದ ಮಣ್ಣನ್ನು ರಸ್ತೆ ಪಕ್ಕದಲ್ಲೇ ಹಾಕುತ್ತಿರುವುದರಿಂದ ರಸ್ತೆ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಎರಡೂ ಬದಿಯಿಂದ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದು ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಹಾಗೂ ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.