ಕಾರವಾರ : ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆ ಆದ ನಂತರ ವಧು ಎಡಗೈಯಲ್ಲಿ ಊಟ ಮಾಡಿದ ಒಂದೇ ಕಾರಣಕ್ಕೆ ವರ ಈ ಹುಡುಗಿಯೇ ಬೇಡ ಎಂದು ಅಲ್ಲಿಂದ ಕಾಲ್ಕೀಳಲು ಮುಂದಾದ ಘಟನೆ ದಾಂಡೇಲಿಯ ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಜರುಗಿದೆ.
ಜೊಯಿಡಾದ ಕಬೀರ್ ಕಾತು ನಾಯ್ಕ್ ಹಾಗೂ ಯಲ್ಲಾಪುರದ ವಧುವಿಗೆ ಮೂರು ದಿನಗಳ ಹಿಂದೆ ಮಾತುಕತೆ ನಡೆದು ಮದುವೆ ನಿಶ್ಚಯವಾಗಿತ್ತು. ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾಂಗಲ್ಯ ಧಾರಣೆ ಬಳಿಕ ವಧು-ವರರು ಊಟಕ್ಕೆ ಕುಳಿತ ಸಂದರ್ಭದಲ್ಲಿ ವಧು ಎಡಗೈನಲ್ಲಿ ಊಟ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ವರ ಹಾಗೂ ಆತನ ಪೋಷಕರು ಆಕೆಯನ್ನು ಬಿಟ್ಟು ಕಾರನ್ನೇರಿ ಹೊರಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಅಂತ್ಯಕ್ರಿಯೆ ಬಳಿಕ ಕಾಡಿದ ಶಂಕೆ.. ಗುಂಡಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!
ತಕ್ಷಣ ವಧುವಿನ ಕಡೆಯವರು ಧಾವಿಸಿ ವರ ಹಾಗೂ ಆತನ ಕುಟುಂಬವನ್ನು ಸ್ಥಳದಿಂದ ತೆರಳದಂತೆ ತಡೆದು ಮಾತುಕತೆ ಆಡುವ ಮೂಲಕ ಬಗೆ ಹರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ. ವಧು ಅಂಗವಿಕಲೆಯಾಗಿದ್ದು, ಮೂರು ದಿನದಲ್ಲಿಯೇ ಮದುವೆ ನಿಶ್ಚಯ ಮಾಡಿಕೊಳ್ಳಲಾಗಿತ್ತು.
ವರನ ಕಡೆಯವರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕುಟುಂಬಸ್ಥರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಹಾಗೂ ಮಹಿಳಾ ಕೇಂದ್ರದ ಸಿಬ್ಬಂದಿ ಆಗಮಿಸಿ ವಧು-ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕರೆದೊಯ್ದು ವರನಿಗೆ ಬುದ್ಧಿ ಹೇಳಿದ್ದಾರೆ.
ಬಳಿಕ ಮನ ಪರಿವರ್ತನೆ ಮಾಡಿದ ಪೊಲೀಸ್ ಸಿಬ್ಬಂದಿ ವರನಿಂದ ಮುಚ್ಚಳಿಕೆ ಬರೆಯಿಸಿಕೊಂಡು ವಧು-ವರರಿಗೆ ದಾಂಪತ್ಯ ಜೀವನ ಮುಂದುವರಿಸುವಂತೆ ಸೂಚಿಸಿ ಸಮಸ್ಯೆ ಇತ್ಯರ್ಥಗೊಳಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.