ಕಾರವಾರ : ಲಂಗರು ತುಂಡಾಗಿ ಕಳೆದ 12 ದಿನಗಳಿಂದ ನಗರದ ದಿವೇಕರ್ ಕಾಲೇಜು ಬಳಿ ಕಡಲತೀರದಲ್ಲಿ ಹೂತುಹೋಗಿದ್ದ ಮಂಗಳೂರು ಮೂಲದ ಪರ್ಷಿಯನ್ ಬೋಟ್ ಕೊನೆಗೂ ನೆಲ ಬಿಟ್ಟು ನೀರಿಗಿಳಿದಿದೆ. ಹವಾಮಾನ ವೈಪರೀತ್ಯದಿಂದಾಗಿ ಸೆ.20 ರಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಉಡುಪಿ, ಮಂಗಳೂರು, ಗೋವಾ ಹಾಗೂ ತಮಿಳುನಾಡು ಮೂಲದ ಕೆಲ ಮೀನುಗಾರಿಕಾ ಬೋಟುಗಳು ಕಾರವಾರದ ಟ್ಯಾಗೋರ್ ಕಡಲತೀರದ ಬಳಿ ಲಂಗರು ಹಾಕಿದ್ದವು.
ಆದರೆ, ಗಾಳಿಯ ರಭಸಕ್ಕೆ ಎರಡು ಬೋಟುಗಳು ಲಂಗರು ತುಂಡಾಗಿ ದಡಕ್ಕೆ ಬಂದು ಸಿಲುಕಿಕೊಂಡಿದ್ದವು. ಒಂದನ್ನು ತೆರವು ಮಾಡಲಾಗಿತ್ತು. ಆದರೆ ಮಂಗಳೂರಿನ ಸುರತ್ಕಲ್ ಮೂಲದ ಮಿಸ್ಬಾ ಹೆಸರಿನ ಬೋಟ್ ತೆರವಿಗೆ ವಿವಿಧ ರೀತಿಯ ಪ್ರಯತ್ನ ನಡೆಸಿದರೂ ಮರಳಿ ನೀರಿಗಿಳಿಸಲು ಸಾಧ್ಯವಾಗಲಿಲ್ಲ.
ಇದರಿಂದ ಸುಮಾರು 12 ಮೀನುಗಾರರಿದ್ದ ಬೋಟ್ ಕಡಲಿನಲ್ಲಿಯೇ ನಿಲ್ಲುವಂತಾಗಿತ್ತು. ಬೋಟ್ ಮೇಲೆತ್ತಲು ಇತರೆ ಬೋಟ್ ಸಹಾಯ ಪಡೆದಿದ್ದರೂ ಕೂಡ ಹಗ್ಗವೇ ತುಂಡಾಗಿ ನೀರಿಗಿಳಿಸಲು ಸಾಧ್ಯವಾಗಿರಲಿಲ್ಲ. ದೋಣಿಯ ಎಂಜಿನ್ ಕೂಡಾ ಹಾಳಾಗಿತ್ತು. ಅಲ್ಲದೆ ಬೋಟ್ನಲ್ಲಿದ್ದ ಮೀನು ಕೂಡ ಹಾಳಾಗುವ ಸಾಧ್ಯತೆ ಇರುವ ಕಾರಣಕ್ಕೆ ಸಿಕ್ಕ ಬೆಲೆಗೆ ಮಾರಾಟ ಮಾಡಿದ್ದರು. ಕರಾವಳಿ ಕಾವಲು ಪಡೆ ಹಾಗೂ ಬಂದರು ಇಲಾಖೆಯ ಟಗ್ ಬೋಟ್ ಸಹಾಯ ಕೇಳಿದ್ದರೂ ಮೇಲಾಧಿಕಾರಿಗಳ ಅನುಮತಿಬೇಕೆಂದು ಟಗ್ ಕೊಡಲು ನಿರಾಕರಿಸಲಾಗಿತ್ತು.
ಕಳೆದ ಎರಡು ದಿನದ ಹಿಂದೆ ಯಲ್ಲಾಪುರದಿಂದ ಕ್ರೇನ್ ಹಾಗೂ ಜೆಸಿಬಿ ತಂದು ಬೋಟ್ ನೀರಿಗೆ ಇಳಿಸುವ ಕಾರ್ಯಾಚರಣೆ ನಡೆಸಲಾಯಿತಾದರೂ ಸಾಧ್ಯವಾಗಿಲ್ಲ. ಕೆಲವೇ ಮೀಟರ್ ದೂರದವರೆಗೆ ಮಾತ್ರ ಕೊಂಡೊಯ್ದು ಕಾರ್ಯಾಚರಣೆ ಸ್ಥಗಿತ ಗೊಳಿಸಲಾಗಿತ್ತು. ಆದರೆ ಸಚಿವ ಮಂಕಾಳ ವೈದ್ಯ ಅವರು ಬೋಟ್ ತೆರವಿಗೆ ಟಗ್ ಬೋಟ್ ಕಳುಹಿಸಿಕೊಡುವಂತೆ ಕಾರವಾರ ಬಂದರಿನ ಅಧಿಕಾರಿಗಳಿಗೆ ಸೂಚಿಸಿದ್ದಾರಾದರೂ ಟಗ್ ಸಿಕ್ಕಿರಲಿಲ್ಲ. ಆದರೆ ಇಂದು ಮುಂಜಾನೆ ಸ್ವಲ್ಪ ದೂರ ತಳ್ಳಿದ್ದ ಬೋಟ್ ಅನ್ನು ಕೊನೆಗೂ ಇತರೆ ಬೋಟ್ ಹಾಗೂ ಜೆಸಿಬಿ ಸಹಕಾರದಿಂದ ತಳ್ಳಿ ನೀರಿಗಿಳಿಸಲಾಗಿದೆ. ಸಮುದ್ರದಲ್ಲಿ ಅಲೆಗಳು ಜೋರಾದ ಕಾರಣದಿಂದ ಕೊನೆಗೂ ಕಾರ್ಯಾಚರಣೆ ಮೂಲಕ ಬೋಟ್ ನೀರಿಗಿಳಿಸಿದ್ದಾರೆ.
ಕಾರವಾರ ನಗರದ ಪೊಲೀಸ್ ಠಾಣೆಯಲ್ಲಿ ದೂರು: ಬೋಟು ಮರಳಿನಲ್ಲಿ ಹುದುಗಿಕೊಂಡಿದ್ದರಿಂದ ಎಂಜಿನ್ ಸೇರಿದಂತೆ ಗೇರ್‌ಬಾಕ್ಸ್, ಚುಕ್ಕಾಣಿ ಮತ್ತು ಪ್ರೊಫೆಲರ್ ಕೂಡಾ ಹಾಳಾಗಿವೆ. ಈ ಬಗ್ಗೆ ಕಾರವಾರ ನಗರದ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ರಿಪೇರಿಗಾಗಿ ಅಂದಾಜು 29 ಲಕ್ಷ ಖರ್ಚಾಗಲಿದೆ. ಬೋಟನ್ನು ನೀರಿಗೆಳೆದ ಬಳಿಕ ಕಾರವಾರದ ಬಂದರಿನಲ್ಲಿ ಮೇಲಕ್ಕೆತ್ತಿ ರಿಪೇರಿ ಮಾಡಿಸಲಾಗುವುದು. ಆದರೆ ಕಾರ್ಯಾಚರಣೆಗೆ ಬಳಸಿದ ಯಂತ್ರಗಳ ಬಾಡಿಗೆ, ಕಾರ್ಮಿಕರ ವಸತಿ ಸೇರಿದಂತೆ ಒಟ್ಟು 35 ಲಕ್ಷ ರೂ. ನಷ್ಟವಾಗಿದೆ ಎಂದು ಫಾರುಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Fishing: ಕಾರ್ಮಿಕರಿಲ್ಲದೆ ಲಂಗರು ಹಾಕಿದ ಬೋಟ್ಗಳು; ಉತ್ತಮ ವಾತಾವರಣವಿದ್ದರೂ ಶುರುವಾಗದ ಮೀನುಗಾರಿಕೆ!