ಭಟ್ಕಳ : ತ್ಯಾಜ್ಯ ವಿಲೇವಾರಿ ಸಮಸ್ಯೆ ಇಡೀ ಜಗತ್ತನ್ನು ಕಾಡುತ್ತಿದೆ. ಅದಕ್ಕಿನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದ್ರೆ, ಸಮರ್ಪಕ ಘನ ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯದ ಗಮನ ಸೆಳೆದಿರುವ ಭಟ್ಕಳ ಪುರಸಭೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಸಾಗಿದ್ದು, ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಭಟ್ಕಳದಿಂದಲೇ ತೊಲಗಿಸುವ ಸಾಹಸಕ್ಕೆ ಕೈ ಹಾಕಿದೆ.
ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ 25 ಕೋಳಿ ಮಾಂಸ ಮಾರಾಟ ಅಂಗಡಿಗಳಿವೆ. 5-6 ಕುರಿ ಮಾಂಸದ ಅಂಗಡಿಗಳು ಸಹ ನಿತ್ಯವೂ ವ್ಯಾಪಾರ ನಡೆಸುತ್ತಿವೆ. ಪ್ರತಿ ಮನೆಯ ಕಸ, ತ್ಯಾಜ್ಯಗಳ ಸಂಗ್ರಹದ ಜೊತೆಗೆ ಮಾಂಸದ ಅಂಗಡಿಗಳ ತ್ಯಾಜ್ಯ ಸಂಗ್ರಹಿಸಿ, ಅದನ್ನು ವಿಲೇವಾರಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿ. ಹಾಗಾಗಿ, ಭಟ್ಕಳದಿಂದ ನಿತ್ಯವೂ ತ್ಯಾಜ್ಯಗಳನ್ನು ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್ ಕಂಪನಿಗೆ ರಫ್ತು ಮಾಡಲಾಗುತ್ತಿದೆ.
ಕಂಡ ಕಂಡಲ್ಲಿ ಸಾರ್ವಜನಿಕರು ಮಾಂಸದ ತ್ಯಾಜ್ಯಗಳನ್ನು ಎಸೆದು ಪರಿಸರ ಮಾಲಿನ್ಯ ಸೃಷ್ಟಿಸುವುದು ಒಂದು ಕಡೆಯಾದ್ರೆ, ಇನ್ನೊಂದೆಡೆ ಬೀದಿ ಶ್ವಾನಗಳು ಮಾಂಸದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ತಿಂದು ಹಾಕುತ್ತಿವೆ. ಅಷ್ಟೇ ಅಲ್ಲ, ಕಾಗೆ, ಹದ್ದುಗಳು ತ್ಯಾಜ್ಯಗಳನ್ನು ತಿಂದು ಎಲ್ಲೆಂದರಲ್ಲಿ ಎಸೆದು ಮಾಲಿನ್ಯಕ್ಕೆ ಕಾರಣವಾಗಿವೆ.
ಕೆಲವು ಕಾಂಪೌಂಡ್ ಇಲ್ಲದ ದೇವಸ್ಥಾನಗಳ ಒಳಗೂ ಸಹ ಮಾಂಸದ ತ್ಯಾಜ್ಯಗಳು ಬಂದು ಬಿದ್ದು, ಕೋಮುಗಳ ನಡುವಿನ ಸಾಮರಸ್ಯವನ್ನೇ ಹಾಳುಗೆಡಿಸಿದ ಉದಾಹರಣೆಗಳಿವೆ. ಇದೇ ಮಾಂಸ ತ್ಯಾಜ್ಯಗಳಿಂದಾಗಿ ಊರಿಗೆ ಬೆಂಕಿ ಹೊತ್ತಿಕೊಂಡು ಪೊಲೀಸರು ನಿದ್ದೆ ಬಿಟ್ಟು ಕಾಯುತ್ತಾ ಕುಳಿತಿದ್ದನ್ನು ಭಟ್ಕಳದ ಜನ ಮರೆತಿಲ್ಲ. ಈ ಎಲ್ಲಾ ಹೋರಾಟ, ಹಾರಾಟ, ಸಂಕಟಗಳಿಗೂ ಪುರಸಭೆಯೇ ಪರಿಹಾರ ಕಂಡು ಹಿಡಿದಿದೆ.
ಭಟ್ಕಳದಿಂದ 3-4 ಟನ್ ತ್ಯಾಜ್ಯ ಮಂಗಳೂರಿಗೆ : ಭಟ್ಕಳದಿಂದ ನಿತ್ಯವೂ ತ್ಯಾಜ್ಯಗಳನ್ನು ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್ ಕಂಪನಿಗೆ ರಫ್ತು ಮಾಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಟ್ಕಳ ಪುರಸಭಾ ಪೌರ ಕಾರ್ಮಿಕರು ಕೋಳಿ, ಕುರಿ ಮಾಂಸದ ಅಂಗಡಿಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ನಿತ್ಯವೂ ಸಂಜೆ 4 ಗಂಟೆಯ ಸುಮಾರಿಗೆ ಸೌಝಾ ಕಂಪನಿಯ ವಾಹನ ಈ ಎಲ್ಲಾ ಮಾಂಸದ ತ್ಯಾಜ್ಯಗಳನ್ನು ಪೆಟ್ಟಿಗೆಗಳಲ್ಲಿ ವ್ಯವಸ್ಥಿತವಾಗಿ ತುಂಬಿಸಿಕೊಂಡು ಮಂಗಳೂರಿಗೆ ಕೊಂಡೊಯ್ಯುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರವೊಂದು ಸಿಕ್ಕಂತಾಗಿದೆ.