ಭಟ್ಕಳ (ಉತ್ತರಕನ್ನಡ) : ಭಟ್ಕಳ ತಾಲೂಕಿನಲ್ಲೂ ಕೊರೊನಾ ಪ್ರಕರಣ ಹೆಚ್ಚಾಗಿವೆ. ಈ ಹಿನ್ನೆಲೆ ಹೆಬಳೆ ಪಂಚಾಯತ್ ವ್ಯಾಪ್ತಿಯ ಹನಿಪಾಬಾದ್ ರಸ್ತೆಯ ಭಟ್ಕಳ ವುಮೆನ್ಸ್ ಸೆಂಟರ್‌ನ ಕೊರೊನಾ ಕೇಂದ್ರವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. 100 ಹಾಸಿಗೆಯುಳ್ಳ ಹೊಸ ಕೊರೊನಾ ಕೇಂದ್ರವು ಇಂದು ಅಥವಾ ನಾಳೆಯಿಂದ ಸೋಂಕಿತರಿಗಾಗಿ ತೆರೆದುಕೊಳ್ಳಲಿದೆ ಎಂದು ಮಜ್ಲಿಸ್-ಇ-ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ ಜೆ ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾಮಿಯಾಬಾದ್ ರಸ್ತೆಯ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಭವ್ಯ ಕಟ್ಟಡದಲ್ಲಿ 100 ಹಾಸಿಗೆ ಹಾಕುವ ಕಾರ್ಯ ಭರದಿಂದ ಸಾಗಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರನ್ನು ಈ ಹಿಂದೆ ಕಾರವಾರ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಸೋಂಕಿತ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ, ಅಲ್ಲಿ ಕಳಪೆ ನಿರ್ವಹಣೆಯ ದೂರು ಕೇಳಿ ಬರುತ್ತಿವೆ. ಕೊರೊನಾದಿಂದ ಬಳಲುತ್ತಿರುವ ಜನರಿಗೆ ಸ್ಥಳಾವಕಾಶ ಕಲ್ಪಿಸಲು ಮಹಿಳಾ ಕೇಂದ್ರವನ್ನು ಈಗ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಇಲ್ಲಿ ಹಾಸಿಗೆಗಳನ್ನು ಹಾಕಲಾಗುತ್ತಿದೆ. ಆದರೆ, ಹಾಸಿಗೆಗಳೇ ಲಭ್ಯವಿಲ್ಲ. 'ನಾವು ಹೊಸ ಹಾಸಿಗೆಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ. ಮಂಗಳೂರು, ಹುಬ್ಬಳ್ಳಿ, ಮುಂಬೈ ಮತ್ತು ಗುಜರಾತ್‌ನಲ್ಲಿ ಸಂಪರ್ಕ ಮಾಡಲಾಗುತ್ತಿದೆ. ಆದರೆ, ಹಾಸಿಗೆಗಳು ಲಭ್ಯವಿಲ್ಲ. ಕಾರವಾರ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಯು ಸರಿಯಾಗಿಲ್ಲ ಎನ್ನುವ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದೆ' ಎಂದು ಇಂಡಿಯನ್ ನವಯತ್ ಫೋರಂ ಉಪಾಧ್ಯಕ್ಷ ಎಸ್ ಎಂ ಅರ್ಷದ್ ಹೇಳಿದ್ದಾರೆ.
ವುಮನ್ಸ್ ಸೆಂಟರ್‌ನ ಕೊರೊನಾ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ಈ ಸಂಸ್ಥೆಯ ಮಾಲೀಕರಾದ ಶ್ರೀಮತಿ ಖಾದಿಜಾ ಖಾಜಿ ಮತ್ತು ಅಮೆರಿಕದ ಪ್ರಸಿದ್ಧ ಉದ್ಯಮಿ ಜುಬೈರ್ ಖಾಝಿಯವರು ಅತ್ಯಂತ ಸಂತೋಷದಿಂದ ಒಪ್ಪಿ ತಾತ್ಕಾಲಿಕ ಕೊರೊನಾ ಕೇಂದ್ರವನ್ನಾಗಿ ಪರಿವರ್ತಿಸಲು ಒಪ್ಪಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕೆ ಹರೀಶ್‌ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿದ್ದಾರೆ.