ಭಟ್ಕಳ: ತಾಲೂಕಿನ ಬೆಂಗ್ರೆ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಕೋಗ್ತಿಯಲ್ಲಿ ಡಿವೈಡರ್ ಮಧ್ಯೆ ಪಾಸಿಂಗ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಅಲ್ಲಿನ ಬೆಂಗ್ರೆ, ಮಾವಿನಕಟ್ಟೆ, ಕೋಗ್ತಿ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೆಂಗ್ರೆ, ಮಾವಿನಕಟ್ಟೆ ಹೃದಯ ಭಾಗಕ್ಕೆ ಬರಲು ಅನುಕೂಲವಾದ ಯಾವ ರಸ್ತೆಯೂ ಇಲ್ಲ. ಈ ಭಾಗದಲ್ಲಿ ಕ್ರಾಸಿಂಗ್ ರಸ್ತೆ ಇಲ್ಲದೇ ಇರುವುದರಿಂದ ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಈ ಎರಡು ಭಾಗದಲ್ಲಿ ಸುಮಾರು 4,000ರಿಂದ 8,000 ಜನರು ವಾಸಿಸುತ್ತಿದ್ದು, ದಿನ ಕೆಲಕ್ಕೆ ಹೋಗಬೇಕಾದರೆ 3ರಿಂದ 4 ಕಿ.ಮೀ. ವ್ಯಾಪ್ತಿಯಲ್ಲಿ ನಡೆದು ಹೋಗಿ ಪುನಃ ಬರಬೇಕಾದ ಪರಿಸ್ಥಿತಿ ಇದೆ. ಬೆಂಗ್ರೆ ಮಾರುಕಟ್ಟೆಯಲ್ಲಿ ಅನಾದಿ ಕಾಲದಿಂದಲೂ ಇರುವ ಪಾಸಿಂಗ್ ಸರ್ಕಲ್ ಬಂದ್ ಮಾಡಿರುವುದರಿಂದ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಪಾಸಿಂಗ್ ನಿರ್ಮಾಣ ಮಾಡಿ, ಜನರಿಗೆ ಅನುಕೂಲ ಮಾಡಬೇಕಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.