ಕಾರವಾರ (ಉತ್ತರಕನ್ನಡ) : ಬೆಳೆಯುವ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಆರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ, ಹೀಗೆ ಹತ್ತು ಹಲವು ಉದ್ದೇಶಗಳನ್ನು ಇಟ್ಟುಕೊಂಡ ಅಂಗನವಾಡಿ ಕೇಂದ್ರ ತೆರೆಯಲಾಗುತ್ತದೆ. ಆದರೆ, ರಾಜ್ಯದ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ನೂರಾರು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಬಾಡಿಗೆ ನೀಡದೇ ನಿರ್ಲಕ್ಷ್ಯತನ ತೋರುತ್ತಿದೆ.
ಉತ್ತರಕನ್ನಡದಲ್ಲಿ ಹಲವು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಮತ್ತೊಂದೆಡೆ ಈಗಲೋ ಆಗಲೋ ಬೀಳುವಂತಹ ಕಟ್ಟಡದಲ್ಲಿ ಪುಟ್ಟ ಮಕ್ಕಳು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ಬರುವ ಅಂಗನವಾಡಿಗಳ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. ಕೆಲವೆಡೆ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅಂಗನವಾಡಿ ಶಿಕ್ಷಕರೇ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 2782 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ ಸುಮಾರು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಇನ್ನು ಹಲವು ಅಂಗನವಾಡಿಗಳು ಶಾಲಾ ಕಟ್ಟಡದಲ್ಲಿದ್ದು, ಸ್ವಂತ ಕಟ್ಟಡ ಇರುವ ಅಂಗನವಾಡಿಗಳ ದುರಸ್ತಿ ಕಾರ್ಯ ನಡೆದಿಲ್ಲ.
ಅಂಗನವಾಡಿ ಶಿಕ್ಷಕಿ ಶಾಂತಿ ಶೇಟ್ ಮಾತನಾಡಿ, ನಮ್ಮ ಅಂಗನವಾಡಿಗಳಿಗೆ ಸ್ವಂತ ಜಾಗ ಇಲ್ಲ. ಹಲವು ಜಾಗಗಳು ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಅಲ್ಲದೇ ಕೆಲವೆಡೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಇದ್ದು, ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಬಾಡಿಗೆಯನ್ನೂ ಕೂಡಾ ನೀಡಿಲ್ಲ. ನಾವು ನಮ್ಮ ಕೈಯಾರೆ ಹಣ ಕಟ್ಟುವಂತಾಗಿದೆ. ನಾವು ಕಟ್ಟಿರುವ ಬಾಡಿಗೆ ಹಣವೂ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
’’ಉತ್ತರಕ್ನಡ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಅಂಗನವಾಡಿಗಳ ಸ್ಥಿತಿ ಹೀನಾಯವಾಗಿದೆ. ಹಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಕೆಲವು ಅಂಗನವಾಡಿಗಳ ಕಟ್ಟಡ ಸರಿಯಿಲ್ಲ. ಈ ಸಂಬಂಧ ಸಚಿವರಲ್ಲಿ ಮನವಿಯೇನೆಂದರೆ, ಅಂಗನವಾಡಿ ಕೇಂದ್ರಗಳಿಗೆ ಸರ್ಕಾರವು ವಿಶೇಷ ಗಮನ ನೀಡಿ, ಶಿಕ್ಷಕಿಯರಿಗೆ ವೇತನ ನೀಡುವಂತೆ ಒತ್ತಾಯಿಸಿದರು. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು ಪೋಷಕರು ಮಕ್ಕಳ ಶಿಕ್ಷಣಕ್ಕೆ ಅಂಗನವಾಡಿಗಳ ಮೊರೆ ಹೋಗುತ್ತಾರೆ. ಆದರೆ ಸರ್ಕಾರ ಮಾತ್ರ ಜಿಲ್ಲೆಯಲ್ಲಿನ ಅಂಗನವಾಡಿಗಳ ಅಭಿವೃದ್ದಿಗೆ ಯಾವುದೇ ಗಮನ ವಹಿಸುತ್ತಿಲ್ಲ’‘ - ಹೋರಾಟಗಾರ ಭಾಸ್ಕರ್ ಪಟಗಾರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳುವುದಿಷ್ಟು: ’’ಜಿಲ್ಲೆಯ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇರುವುದಿಲ್ಲ. ಇದನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಮಿನರಲ್ ಫಂಡ್ ಬಳಸಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ‘‘ ಎಂದು ಹೇಳಿದರು.