ಕಾರವಾರ (ಉತ್ತರಕನ್ನಡ): ಸಂಘದ ನೋಂದಣಿ ಮಾಡಲು 1,500 ರೂ ಹಣ ಪಡೆಯುವಾಗ ಅಧಿಕಾರಿಯೋರ್ವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಕಾರವಾರದ ಸಹಕಾರಿ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದಿದೆ.
ಸಹಕಾರಿ ಸಂಘಗಳ ಹಿರಿಯ ನಿಬಂಧಕ ಭಾಸ್ಕರ್ ನಾಯ್ಕ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಹಣಕೋಣದ ಸುನೀಲ್ ನಾಯ್ಕ ಎಂಬುವವರು ಶ್ರೀ ಸಾತೇರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಯುತ್ ಕ್ಲಬ್ ಹಣಕೋಣ ಸಂಘದ ನೋಂದಣಿಗೆ ತೆರಳಿದ್ದರು. ಆದರೆ, ಸಂಘದ ನೋಂದಣಿಗಾಗಿ ಅಧಿಕಾರಿ 3 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಕೊನೆಗೆ 1500 ರೂ ಕೊಡುವುದಾಗಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಅದರಂತೆ ಕಾರ್ಯಾಚರಣೆಗೆ ಪ್ಲಾನ್ ರೂಪಿಸಿದ್ದ ಎಸಿಬಿ ಡಿವೈಎಸ್ಪಿ ಮಂಜುನಾಥ ಕೌರಿ ಅವರ ತಂಡ ಇಂದು ಒಂದೂವರೆ ಸಾವಿರ ಲಂಚ ಹಣ ನೀಡುವಾಗ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.