ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಭಾನುವಾರ (ನವೆಂಬರ್ 9) ವಿಮಾನ ನಿಲ್ದಾಣ 7,637 ಪ್ರಯಾಣಿಕರನ್ನು ನಿರ್ವಹಿಸಿದೆ. ಈ ಪೈಕಿ 7,498 ವಯಸ್ಕರು ಮತ್ತು 139 ಶಿಶುಗಳಿದ್ದರು. ಈ ಹಿಂದೆ ಡಿಸೆಂಬರ್ 31, 2023ರಂದು 7,548 ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದರು.
ಮಂಗಳೂರು ವಿಮಾನ ನಿಲ್ದಾಣ 25 ನವೆಂಬರ್ 2023ರಂದು 7,452 ಪ್ರಯಾಣಿಕರನ್ನು, ಆಗಸ್ಟ್ 15, 2024 ರಂದು 7,406 ಪ್ರಯಾಣಿಕರನ್ನು, ನವೆಂಬರ್ 19, 2023ರಂದು 7,399 ಪ್ರಯಾಣಿಕರು ಮತ್ತು 10 ಡಿಸೆಂಬರ್ 2023ರಂದು 7,350 ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವು ಒಂದೇ ದಿನದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದ ದಾಖಲೆಯಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಇ-ಕಾಮರ್ಸ್ ಸರ್ವಿಸ್ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ₹13.78 ಲಕ್ಷ ದಂಡ ಸಂಗ್ರಹ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಈ ಮೊದಲು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಿರ್ವಹಿಸುತ್ತಿತ್ತು. 2020 ಅಕ್ಟೋಬರ್ 31ರ ಬಳಿಕ ಅದಾನಿ ಗ್ರೂಪ್ ನಿರ್ವಹಿಸುತ್ತಿದೆ. ವಿಮಾನ ನಿಲ್ದಾಣದಲ್ಲಿ ಸದ್ಯ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಕಾರ್ಯನಿರ್ವಹಿಸುತ್ತಿದೆ.
5 ದೇಶಿ, 8 ಅಂತಾರಾಷ್ಟ್ರೀಯ ವಿಮಾನ: 5 ದೇಶೀಯ ಮತ್ತು 8 ಅಂತಾರಾಷ್ಟ್ರೀಯ ವಿಮಾನಗಳು ಮಂಗಳೂರಿನಿಂದ ಹಾರಾಟ ನಡೆಸುತ್ತಿವೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ನವದೆಹಲಿ, ಮುಂಬೈಗೆ ಇಲ್ಲಿಂದ ವಿಮಾನ ಸೇವೆ ಲಭ್ಯ. ಹಾಗೆಯೇ ದುಬೈ, ಅಬು ಧಾಬಿ, ದಮಾಮ್, ದೋಹ, ಮಸ್ಕತ್, ಕುವೈತ್, ಜೆಡ್ಡಾ ಮತ್ತು ಬಹರೈನ್ಗೆ ವಿಮಾನ ಸೇವೆ ಇದೆ.
"ದೇಶೀಯವಾಗಿ ಮುಂಬೈ, ಬೆಂಗಳೂರು ಮತ್ತು ಅಂತಾರಾಷ್ಟ್ರೀಯ ಸೇವೆಯಲ್ಲಿ ದುಬೈ ಮತ್ತು ಅಬು ಧಾಬಿಗೆ ಇಲ್ಲಿಂದ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ" ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
"ವಿಮಾನ ನಿಲ್ದಾಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಲಾಂಜ್ನ ವ್ಯವಸ್ಥೆ ಅತ್ಯುತ್ತಮವಾಗಿದೆ. ಹೀಗಾಗಿ, ಹೆಚ್ಚಿನವರು ಇಲ್ಲಿಂದಲೇ ಪ್ರಯಾಣಿಸಲು ಇಚ್ಚಿಸುತ್ತಿದ್ದಾರೆ" ಎಂದು ಪ್ರಯಾಣಿಕ ಸುಹಾನ್ ಆಳ್ವ ಹೇಳಿದರು.