ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ.
ಬಂಗಾರ್ ಅವರ ಪುತ್ರ ಇತ್ತೀಚೆಗೆ ಹಾರ್ಮೋನ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತನ್ನ ಗುರುತನ್ನು 'ಟ್ರಾನ್ಸ್‌ಪರ್ಸನ್' ಎಂದು ಬಹಿರಂಗಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಆರ್ಯನ್, "ಕ್ರಿಕೆಟ್ ಆಡುವ ನನ್ನ ಕನಸು ನನಸಾಗಿಸಲು ಅನೇಕ ತ್ಯಾಗಗಳನ್ನು ಮಾಡಿದ್ದೇನೆ. ಆದರೆ ಆಟದ ಹೊರತಾಗಿ, ನನ್ನ ಸ್ವಂತ ವಿಷಯಕ್ಕೆ ಸಂಬಂಧಿಸಿದ ಪ್ರಯಾಣವೂ ಇದೆ. ನನ್ನೀ ಪಯಣ ಸುಲಭವಾಗಿರಲಿಲ್ಲ. ಆದರೆ, ಇದರಲ್ಲಿ ಗಳಿಸಿದ ಗೆಲುವು ನನಗೆ ಎಲ್ಲಕ್ಕಿಂತ ದೊಡ್ಡದು. ಇದು ಪರಿಶ್ರಮ ಮತ್ತು ಅಚಲ ಸಮರ್ಪಣೆಯಿಂದ ತುಂಬಿದ ಪ್ರಯಾಣ. ಇತರರನ್ನು ಎದುರಿಸಲು ಪ್ರತಿ ಹೆಜ್ಜೆಯಲ್ಲೂ ನನಗೆ ಶಕ್ತಿ ಬೇಕಿತ್ತು" ಎಂದಿದ್ದಾರೆ.
ಆರ್ಯನ್‌ನಿಂದ ಅಯನಾ: ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ ತಮ್ಮ ಹೆಸರನ್ನು ಆರ್ಯನ್‌ನಿಂದ 'ಅನಯಾ' ಎಂದು ಬದಲಾಯಿಸಿಕೊಂಡಿದ್ದಾರೆ. ಇದರೊಂದಿಗೆ ಹುಡುಗನಿಂದ ಹುಡುಗಿಯಾಗಿ ಬದಲಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅನಯಾ ಎಲ್ಲಿದ್ದಾರೆ?: ಅನಯಾ ಪ್ರಸ್ತುತ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಇವರು ತಂದೆಯಂತೆ ಕ್ರಿಕೆಟಿಗ. ಎಡಗೈ ಬ್ಯಾಟರ್ ಆಗಿದ್ದು ಸ್ಥಳೀಯ ಕ್ಲಬ್‌ಗೆ ಆಡುತ್ತಿದ್ದಾರೆ. ಕೆಲವು ಕ್ಲಬ್‌ಗಾಗಿ ಆಡಿದ್ದು 145 ರನ್ ಗಳಿಸಿದ್ದಾರೆ.
ಸಂಜಯ್ ಬಂಗಾರ್ ಕುರಿತು..: ಸಂಜಯ್ ಬಂಗಾರ್ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ. ಟೆಸ್ಟ್, ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 470 ರನ್ ಗಳಿಸಿದ್ದಾರೆ. 100 ಇವರ ಹೈಸ್ಕೋರ್. ಏಕದಿನ ಸ್ವರೂಪದಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 180 ರನ್ ಕಲೆ ಹಾಕಿದ್ದಾರೆ. 57 ಹೈಸ್ಕೋರ್. ಐಪಿಎಲ್ನಲ್ಲೂ 12 ಪಂದ್ಯಗಳನ್ನು ಆಡಿದ್ದು, 49 ರನ್ ಗಳಿಸಿದ್ದಾರೆ.
ಇದನ್ನೂ ಓದಿ: 'ಮೊದಲು ನಿಮ್ಮ ತಂಡದ ಕಡೆ ಗಮನ ಕೊಡಿ': ಕೊಹ್ಲಿ, ರೋಹಿತ್ ಫಾರ್ಮ್ ಟೀಕಿಸಿದ್ದ ಪಾಂಟಿಂಗ್‌ಗೆ ಗಂಭೀರ್ ಪಂಚ್