ಶಿರಸಿ : ಜಿಲ್ಲೆಯಲ್ಲಿ ಸೋಮವಾರದಿಂದ ವಾರದ ನಾಲ್ಕು ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದರು.
ಗುರುವಾರ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಅವಕಾಶ ನೀಡಿದ್ದರಿಂದ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವ ವರದಿ ಬಂದ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಇನ್ಮುಂದೆ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುವುದು. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದರು.
ಈ ಹಿಂದೆ ಇದ್ದ ಬೆಳಿಗ್ಗೆ 6 ರಿಂದ 10ರವರೆಗಿನ ಅವಧಿ ಬದಲಿಸಿ ನಾಲ್ಕು ದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅವಶ್ಯಕ ವಸ್ತು ಖರೀದಿಸಲು ಅವಕಾಶವಿರುತ್ತದೆ. ಈ ವೇಳೆ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದೊಂದು ಕಠಿಣ ಲಾಕ್ಡೌನ್ ಅಗಿರಲಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದರು.
ಜಿಲ್ಲೆಯಲ್ಲಿ 662 ಕೋವಿಡ್ ಪ್ರಕರಣ
ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ 662 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.ಕಳೆದ ಕೆಲ ದಿನಗಳಿಂದ ಸಾವಿರದ ಗಡಿಯಲ್ಲಿಯೇ ಕಂಡು ಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ದಾಖಲಾದ ಪಾಸಿಟಿವ್ ಪ್ರಕರಣಗಳ ಪೈಕಿ ಕಾರವಾರ 31, ಅಂಕೋಲಾ 21, ಕುಮಟಾ 63, ಹೊನ್ನಾವರ 141, ಭಟ್ಕಳ 13, ಶಿರಸಿ 104, ಸಿದ್ದಾಪುರ 22, ಯಲ್ಲಾಪುರ 51, ಮುಂಡಗೋಡ 57, ಹಳಿಯಾಳ 90 ಜೋಯಿಡಾ 69 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
![Covid](https://etvbharatimages.akamaized.net/etvbharat/prod-images/kn-kwr-03-corona-update-ka10044_27052021203653_2705f_1622128013_299.jpg)
ಜಿಲ್ಲೆಯಲ್ಲಿ ಸದ್ಯ 5,893 ಸಕ್ರಿಯ ಕೊರೊನಾ ಸೋಂಕಿತರಿದ್ದು, ಈ ಪೈಕಿ 511 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5,382 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 42,701ಕ್ಕೆ ಏರಿಕೆಯಾದಂತಾಗಿದೆ.