ಕಾರವಾರ: ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ವರುಣನ ಆರ್ಭಟ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆ, ಇಂದು ಮೂರು ಗೇಟ್‌ಗಳ ಮೂಲಕ ಒಟ್ಟು 26,916 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯತೊಡಗಿದೆ. ಪರಿಣಾಮ, ಕಾಳಿ ನದಿಗೆ ಯಥೇಚ್ಛವಾಗಿ ನೀರು ಹರಿದುಬರುತ್ತಿದ್ದು, ಕದ್ರಾ ಜಲಾಶಯಕ್ಕೆ 27,107 ಕ್ಯೂಸೆಕ್ ನೀರಿನ ಒಳಹರಿವು ಇದೆ. ಅಲ್ಲದೇ 34.50 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿರುವ ಕದ್ರಾ ಜಲಾಶಯದ ಮಟ್ಟ ಇಂದು ಮಧ್ಯಾಹ್ನದ ಹೊತ್ತಿಗೆ 31.50 ಮೀಟರ್ ತಲುಪಿದ ಹಿನ್ನೆಲೆ, ಜಲಾಶಯದ ಸುರಕ್ಷತೆ ಹಾಗೂ ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 3 ಗೇಟ್‌ಗಳ ಮೂಲಕ ಒಟ್ಟು 26,916 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಕಾಳಿ ನದಿಗೆ ರಾಜ್ಯದ ಅತಿ ದೊಡ್ಡ ಸೂಪಾ ಜಲಾಶಯವಿದೆ. ಆದರೆ ಕಳೆದ ಬಾರಿ ವಿದ್ಯುತ್ ಉತ್ಪಾದನೆ ಕಡಿಮೆಯಾದ ಹಿನ್ನೆಲೆ, ಜತೆಗೆ ಈ ಬಾರಿ ಆರಂಭದಿಂದಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಸೂಪಾ ಜಲಾಶಯ ಕೂಡ ಭರ್ತಿಯಾಗತೊಡಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ.
ಇದನ್ನೂ ಓದಿ: ಗಂಗಾವತಿ: ಮೊರಂ ಅಕ್ರಮ ಸಾಗಣೆ ಅರೋಪ