ಕಾರವಾರ: ಕೊರೊನಾ ಹತೋಟಿಗೆ ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಬಿಗ್ ಶಾಕಿಂಗ್ ಎದುರಾಗಿದೆ. ಇಂದು ಒಂದೇ ದಿನ ಭಟ್ಕಳದಲ್ಲಿ 12 ಜನರಿಗೆ ಸೋಂಕು ಇರುವುದು ಧೃಡಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾದ 20 ದಿನಗಳ ಬಳಿಕ ಮೇ 5 ರಂದು ಭಟ್ಕಳದಲ್ಲಿ 18 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, ಇಂದು ಯುವತಿಯ ಮನೆಯಲ್ಲಿದ್ದ 5 ತಿಂಗಳ ಮಗು ಸೇರಿ ಅಕ್ಕಪಕ್ಕದ ಮನೆ ಹಾಗೂ ಹಳ್ಳಿಯ ಒಟ್ಟು 12 ಜನರಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ಧೃಡಪಟ್ಟಿದೆ. ಮೂವರು ಪುರುಷರು 9 ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿನ ಮೂಲ ಮಂಗಳೂರಿನ ಪಡೀಲ್‌ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಎನ್ನಲಾಗುತ್ತಿದೆ. ಮೇ 5ರಂದು ಧೃಡಪಟ್ಟ 18ವರ್ಷದ ಯುವತಿ ಎಲ್ಲಿಯೂ ಪ್ರಯಾಣ ಬೆಳೆಸಿರಲಿಲ್ಲ. ಆದರೆ, ಆಕೆಯ ಅಕ್ಕ-ಬಾವ ಮಗುವಿನ ಅನಾರೋಗ್ಯ ಕಾರಣದಿಂದಾಗಿ ಏಪ್ರಿಲ್ 20ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಆಸ್ಪತ್ರೆಯಲ್ಲಿದ್ದವರಿಗೆ ಏಂಟು ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿ ಇಬ್ಬರು ಸಾವನ್ನಪ್ಪಿದ್ದರು.
ಇದೀಗ ಆಸ್ಪತ್ರೆಗೆ ತೆರಳಿದ್ದ 18 ವರ್ಷದ ಯುವತಿಯ ಬಾವನಿಗೂ ಸೋಂಕು ಇರುವುದು ಧೃಡಪಟ್ಟಿದೆ. ಆದರೆ, ಆತನ ಪತ್ನಿಯೂ ಜೊತೆಗೆ ತೆರಳಿದ್ದು, ಸದ್ಯ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಇಂದು ಪತ್ತೆಯಾದ ಸೋಂಕಿತರ ಪೈಕಿ ಯಾರಿಗೂ ರೋಗದ ಲಕ್ಷಣ ಕಂಡು ಬಂದಿರಲಿಲ್ಲ. ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕಿಸಿದವರ ಸಂಪರ್ಕಕ್ಕೆ ಬಂದ ಕಾರಣ ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಧೃಡಪಟ್ಟಿದೆ. ಸದ್ಯ ನಿರ್ಬಂಧಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಭಟ್ಕಳದಲ್ಲಿ ಸೋಂಕಿತ ಪ್ರಕರಣ ಹೆಚ್ಚುತ್ತಿದ್ದಂತೆ ಜಿಲ್ಲಾಡಳಿತ ಇನ್ನೂ ಹೆಚ್ಚಿನ ಭದ್ರತೆ ಕೈಗೊಳ್ಳಲು ಮುಂದಾಗಿರುವುದು ತಿಳಿದು ಬಂದಿದೆ.