ಉಡುಪಿ: ಕೋವಿಡ್(COVID) ಪ್ರಕರಣಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಉಡುಪಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಕಳೆದ 14 ದಿನದ ಪಾಸಿಟಿವಿಟಿ ದರವು 1.54 ಇದ್ದು, ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳು ಕಾರ್ಯ ನಿರ್ವಹಿಸಲಿವೆ. ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಹಾರ, ದಿನಸಿ, ಹಣ್ಣು, ಮೀನು, ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯದಂಗಡಿ, ಮದ್ಯದ ಮಳಿಗೆಗಳು ಮಧ್ಯಾಹ್ನ 2ರವರೆಗೆ ತೆರೆದಿರಲಿದ್ದು, ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶವಿದೆ. ಮದುವೆ ಶುಭ ಸಮಾರಂಭಗಳಿಗೆ 400 ಜನರಿಗೆ ಅವಕಾಶ ನೀಡಲಾಗಿದೆ.
ಕೇರಳದಿಂದ ಬರುವವರ ಮೇಲೆ ನಿಗಾ:
ಕೇರಳದಿಂದ ಉಡುಪಿಗೆ ಬರುವವರ ಸಂಖ್ಯೆ ಹೆಚ್ಚಿದ್ದು, ಅಂತವರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. ಉಡುಪಿಗೆ ಬರುವ 72 ಗಂಟೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿರಬೇಕು. ವರದಿ ನೆಗೆಟಿವ್ ಬಂದರೂ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಬೇಕು. ಕ್ವಾರಂಟೈನ್ ಮುಗಿಸಿದ ಬಳಿಕ ಮತ್ತೆ ಟೆಸ್ಟ್ ಮಾಡಿಸಿಕೊಳ್ಳಬೇಕು. ಎರಡು ವ್ಯಾಕ್ಸಿನೇಷನ್ ಮಾಡಿಸಿದ್ದರೂ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಹಾಗೆಯೇ ಮಹಾರಾಷ್ಟ್ರದಿಂದ ಬರುವವರೂ ಕೂಡ 72 ಗಂಟೆ ಮುನ್ನ ಟೆಸ್ಟ್ ಮಾಡಿಸಿರುವ ನೆಗೆಟಿವ್ ವರದಿ ಹೊಂದಿರಬೇಕು. ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕಾರಂಟೈನ್ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ, ಐಷಾರಾಮಿ ಜೀವನ.. ಇಬ್ಬರು ಖದೀಮರು ಅಂದರ್