ಉಡುಪಿ: ಕುಖ್ಯಾತ ಅಂತಾರಾಜ್ಯ ವಾಹನ ಕಳ್ಳರ ತಂಡವೊಂದನ್ನು ಜಿಲ್ಲೆಯ ಕಾಪು ಪೊಲೀಸರು ಸೆರೆಹಿಡಿದಿದ್ದಾರೆ.
ರಾಜ್ಯದ ವಿವಿಧ ಕಡೆಗಳಲ್ಲಿ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಸಯ್ಯದ್ ಮಜರ್ ಪಾಷಾ, ಪಿ.ಕೆ. ಎಲಿಯಾಸ್ ಯಾನೆ ಬಾಬು, ಸಯ್ಯದ್ ಮೆಹಬೂಬ್ ಪಾಷಾ ಹಾಗೂ ಜಿಯಾವುಲ್ ಹಕ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಹುಬ್ಬಳ್ಳಿ-ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರರಾಜ್ಯ ತಮಿಳುನಾಡು ಮತ್ತು ಕೇರಳದಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಆರೋಪಿಗಳು ಸಿಕ್ಕಿರಲಿಲ್ಲ. ಕೊನೆಗೆ ಉಡುಪಿ ಕಟಪಾಡಿಯ ಚೆಕ್ ಪೋಸ್ಟ್ನಲ್ಲಿ ದಾಖಲೆಯಿಲ್ಲದ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳು ಕಳವು ಮಾಡಲಾದ ವಾಹನಗಳನ್ನು ತಮಿಳುನಾಡು ರಾಜ್ಯದ ಕೊಯಿಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್‌ನಲ್ಲಿ ಆರೋಪಿ ಜಿಯಾವುಲ್ ಹಕ್‌ನ ಗುಜರಿ ಅಂಗಡಿಯಲ್ಲಿ ಇಟ್ಟಿದ್ದರು. ತಮಿಳುನಾಡಿನ ಗುಜರಿ ಅಂಗಡಿಯಲ್ಲಿಟ್ಟಿದ್ದ 4 ಮಹೀಂದ್ರ ಬೊಲೆರೋ ಪಿಕ್ ಅಪ್ ವಾಹನಗಳು, 5 ಅಶೋಕ್ ಲೈಲ್ಯಾಂಡ್ ವಾಹನಗಳು, 1 ಟೊಯೋಟ ಕ್ವಾಲಿಸ್, 1 ಮಾರುತಿ 800 ಕಾರು ಮತ್ತು ಕಳವಿಗೆ ಬಳಸಿದ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಜೊತೆಗೆ ನಕಲಿ ನಂಬರ್ ಪ್ಲೇಟ್‌ಗಳು, ಕೀ ಗೊಂಚಲು, 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.