ಉಡುಪಿ: ವೃದ್ಧೆಯೊಬ್ಬರ ಕಣ್ಣಿನಲ್ಲಿ ಇದ್ದ 9 ಸೆಂಟಿ ಮೀಟರ್ ಉದ್ದದ ಜೀವಂತ ಹುಳುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ಘಟನೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ನಡೆದಿದೆ.
ಮಲ್ಪೆಯ 70 ವರ್ಷದ ವೃದ್ಧೆ ಕಣ್ಣು ನೋವಿನಿಂದ ಬಳಲುತ್ತಿದ್ದರು. ಜೂನ್ 1 ರಂದು ಪ್ರಸಾದ್ ನೇತ್ರಾಲಯಕ್ಕೆ ಬಂದಾಗ ವೃದ್ಧೆಯ, ಕಣ್ಣಿನ ಅಕ್ಷಿ ಪಟಲದಲ್ಲಿ ಸುತ್ತುತ್ತಿದ್ದ ಹುಳುವನ್ನು ಗಮನಿಸಿದ ಡಾಕ್ಟರ್ ಕೃಷ್ಣ ಪ್ರಸಾದ್ ಅವರು, ಹುಳುವನ್ನು ನಿಷ್ಕ್ರಿಯಗೊಳಿಸುವ ಔಷಧಿ ನೀಡಿ ಕಳುಹಿಸಿದ್ದರು.
ಆದರೆ ಸೋಮವಾರ ಮತ್ತೆ ವೃದ್ಧೆಯ ಕಣ್ಣಿನಲ್ಲಿ ವಿಪರೀತ ನೋವು ಹಾಗೂ ಉರಿ ಕಾಣಿಸಿಕೊಂಡ ಕಾರಣ, ಆಸ್ಪತ್ರೆಗೆ ಕರೆದುಕೊಂಡು ಬಂದರು. ತುರ್ತಾಗಿ ಸ್ಪಂದಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಜೀವಂತ ಹುಳುವನ್ನು ಹೊರ ತೆಗೆದಿದ್ದಾರೆ.
ನೇತ್ರದ ಒಳ ಪದರದಿಂದ ಇದೇ ಮೊದಲ ಬಾರಿಗೆ ಜೀವಂತ ಹುಳುವನ್ನು ತೆಗೆಯಲಾಗಿದೆ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಅಧ್ಯಯನಕ್ಕಾಗಿ ಈ ಹುಳುವನ್ನೀಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.