ಉಡುಪಿ: ಜಿಲ್ಲಾಡಳಿತದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವವರ ಮೇಲೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆಕ್ರೋಶಗೊಂಡಿದ್ದಾರೆ. ಒಂದಷ್ಟು ಜನ ಕಿಡಿಗೇಡಿಗಳು ಫೋನ್ ಮಾಡಿ ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅದೇನಿದ್ದರೂ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಹಾಗೆ ಮಾಡಿದರೆ ಖಂಡಿತ ಅವರು ಜೈಲಿನಲ್ಲಿ ಇರುತ್ತಾರೆ ಎಂದು ಡಿಸಿ ಗುಡುಗಿದ್ದಾರೆ.
ಕೆಲವರು ಎಲ್ಲೋ ದೂರದಲ್ಲಿ ಕುಳಿತು ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ಆದರೆ ಉಡುಪಿ ಜಿಲ್ಲಾಡಳಿತದ ಮುಂದೆ ಇವೆಲ್ಲಾ ಆಟ ನಡೆಯುವುದಿಲ್ಲ. ಅಂತಹ ಕಿಡಿಗೇಡಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ನಾವೂ ಏನೂ ಕೆಲಸ ಮಾಡುತ್ತಿಲ್ಲ ಎಂಬ ರೀತಿ ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ಅನಾವಶ್ಯಕವಾಗಿ ಮಾತನಾಡಿದರೆ ಅವರು ಎಷ್ಟೇ ದೊಡ್ಡ ಮನುಷ್ಯರಾದರೂ ಸರಿ ಜೈಲಿಗೆ ಕಳಿಸಬೇಕಾಗುತ್ತದೆ.
ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವರು ಅಶಾಂತಿ ಹರಡಿಸುವ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತು ಬಟ್ಟೆ ಕೊಡುತ್ತೇವೆ, ಊಟ ಕೊಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಕೆಲವೊಂದು ವಸ್ತುಗಳೊಂದಿಗೆ ಕೊರೊನಾ ವೈರಸ್ ಹರಡುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಂಟೇನ್ಮೆಂಟ್ ಝೋನ್ಗಳಿಗೆ ಹೊರಗಿನಿಂದ ತರುವ ವಸ್ತುಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಜನರಿಗೆ ಸೋಂಕು ಹರಡಬಾರದು ಎಂಬುದು ನಮ್ಮ ಮುಖ್ಯ ಉದ್ದೇಶ. ಆದ್ದರಿಂದ ಅನಾವಶ್ಯಕ ಮಾತುಗಳನ್ನು ನಿಲ್ಲಿಸಿ ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.