ಉಡುಪಿ: ವ್ಯಕ್ತಿವೋರ್ವ ದೇವಸ್ಥಾನದೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಖಾರ್ವಿಕೇರಿಯ ದಾಕುಹಿತ್ಲುವಿನ ಯುವಕ ರಾಘವೇಂದ್ರ ಖಾರ್ವಿ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅವನನ್ನು ಬಚಾವ್ ಮಾಡಲು ಹೋದ ಜನಾರ್ದನ್ ಖಾರ್ವಿ ಮತ್ತು ಲಕ್ಷ್ಮಣ್ ಖಾರ್ವಿ ಕೂಡಾ ಗಂಭೀರವಾಗಿ ಗಾಯಗೊಂಡು ಉಡುಪಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ಖಾರ್ವಿಕೇರಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ದೇವಳದಲ್ಲಿ ಅರ್ಚಕರಿಗಾಗಿ ಭಕ್ತರೆಲ್ಲರೂ ಕಾದು ಕುಳಿತಿದ್ದರು. ಆಗ ಏಕಾಏಕಿ ಪೆಟ್ರೋಲ್ ಕ್ಯಾನ್ ಹಿಡಿದು ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ದಿಢೀರ್ ಆಗಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಕಾಲುದೀಪದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿದೆ ಎನ್ನಲಾಗ್ತಿದೆ. ಬೆಂಕಿ ಹೊತ್ತಿ ಉರಿದ ತಕ್ಷಣವೇ ಸ್ಥಳದಲ್ಲಿದ್ದ ಜನಾರ್ದನ್ ಖಾರ್ವಿ ಹಾಗೂ ಲಕ್ಷ್ಮಣ್ ಖಾರ್ವಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದಾಗಿ ಅವರಿಬ್ಬರಿಗೂ ಬೆಂಕಿ ತಗುಲಿದೆ.
ಘಟನೆಯಲ್ಲಿ ರಾಘವೇಂದ್ರ ಖಾರ್ವಿ ಹಾಗೂ ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಂಗೊಳ್ಳಿಯ ಆಪತ್ಭಾಂದವ ಆ್ಯಂಬುಲೆನ್ಸ್ ನ ಇಬ್ರಾಹಿಂ ಹಾಗೂ ತಂಡ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಸದ್ಯ ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.