ಉಡುಪಿ/ಕುಂದಾಪುರ: ಕಾವ್ರಾಡಿ ಮುಳ್ಳುಗುಡ್ಡೆ, ಬಸ್ರೂರು ಮತ್ತು ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹಗಳಿಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿನ ಮಂಕಿ ನಿವಾಸಿ ವಿಲ್ಸನ್ ಪಿಯಾದಾಸ್ ಲೋಪಿಸ್ (29) ಮತ್ತು ತೆಕ್ಕಟ್ಟೆ ನಿವಾಸಿ ಗಂಗಾಧರ (40) ಬಂಧಿತ ಆರೋಪಿಗಳು. ಇವರು 2019 ಮೇ ತಿಂಗಳಿನಲ್ಲಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯಲ್ಲಿರುವ ನಾಗರಾಜ್ ಎನ್ನುವರ ಮನೆಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು 64,900 ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದರು.
ಅಲ್ಲದೇ, 2019 ಜೂನ್ ತಿಂಗಳಿನಲ್ಲಿ ಬಸ್ರೂರು ಗ್ರಾಮದ ಕೊಳ್ಕೇರಿಯಲ್ಲಿ ನಗದು, ಚಿನ್ನದ ಸರ, ಚಿನ್ನದ ಓಲೆ ಸಹಿತ ಸುಮಾರು 2 ಲಕ್ಷ ರೂ. ಮೌಲ್ಯದ ನಗದು & ಚಿನ್ನಾಭರಣಗಳು ಕಳವು ಮಾಡಿದ್ದರು.
2019 ನವೆಂಬರ್ ತಿಂಗಳಿನಲ್ಲಿ ಕುಂದಾಪುರ ರೈಲ್ವೆ ಸ್ಟೇಷನ್ ವಸತಿಗೃಹದಲ್ಲಿ ವಾಸವಿದ್ದ ಸುಬ್ಬ ದೇವಾಡಿಗ ಎನ್ನುವರ ವಸತಿ ಗೃಹಕ್ಕೆ ರಾತ್ರಿ ನುಗ್ಗಿ, ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದರು. ಈ ಮೂರು ಘಟನೆ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಮಾರು 64.760 ಗ್ರಾಂ ಚಿನ್ನ ಹಾಗೂ 112 ಗ್ರಾಂ ಬೆಳ್ಳಿ ಆಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.