ಉಡುಪಿ: ಕಾರ್ಕಳದಿಂದ ನಾನು ಸ್ಪರ್ಧಿಸುವ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ರಾಜಕೀಯ ಜನ್ಮ ಕೊಟ್ಟ ಕಾರ್ಕಳದಲ್ಲೇ ನನ್ನ ಮರಣ ಎಂದು ಕಾರ್ಕಳದಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಮ್ಮ ಮೇಲಾದ ಅಪಪ್ರಚಾರದ ವಿರುದ್ಧ ಗುಡುಗಿದ್ದಾರೆ.
2004ರ ಚುನಾವಣೆಯ ನಂತರ ಸುನಿಲ್ ಕುಮಾರ್ ಹತ್ತಿರ 100 ಗಣಿಗಾರಿಕೆ ಲಾರಿ ಇದೆ, ಜಾತಿ ಯಾವುದು ಎಂಬ ಗೊಂದಲ ಇದೆ, ನಗರದ ಜಿಎಸ್‌ಬಿ ಸಮುದಾಯಕ್ಕೆ ವಿರೋಧವಿದೆ, ಸುನಿಲ್ ಕುಮಾರ್ಗೆ ಬಂಟ ಸಮುದಾಯ ವಿರೋಧವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು, ಆದರೆ, ಅಪಪ್ರಚಾರದ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು.
ಬಿಜೆಪಿ ಕಾರ್ಕಳದಲ್ಲಿ ಒಂದು ಆಲದ ಮರ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾಗಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾಯಿತು. ಲವ್ ಜಿಹಾದ್ ವಿರುದ್ಧ ಕಾನೂನು ರಚನೆಯಾಗಿದ್ದು ನಮ್ಮ ಕಾಲದಲ್ಲಿ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದು ನಾವು. ಹನುಮಗಿರಿಗೆ 100 ಕೋಟಿ ರೂಪಾಯಿ ನೀಡಿದ್ದು ನಮ್ಮ ಸರ್ಕಾರ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ಶಿವ ಸೇನೆಗಿಂತ ಸಂಘ ಪರಿವಾರ ಉತ್ತಮ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣಕ್ಕೆ ಇಷ್ಟೆಲ್ಲಾ ಕೆಲಸವಾಗಿದೆ. ಶಿವ ಸೇನೆಯ ಹಿಂದುತ್ವ ಬಹಳ ಒಳ್ಳೆಯದು ಎಂದು ಭಾವಿಸುತ್ತಿದ್ದೆವು. ಶಿವಸೇನೆಯ ನಾಯಕರು ಹೇಳಿಕೆ ಕೊಟ್ಟರೆ ಶಹಬ್ಬಾಸ್ ಎನ್ನುತ್ತಿದ್ದೆವು. ಬಿಜೆಪಿ ಸಂಘ ಪರಿವಾರದ ಹಿಂದುತ್ವಕ್ಕಿಂತ ಶಿವಸೇನೆ ಗಟ್ಟಿ ಎಂದು ಭಾವಿಸಿದ್ದೆವು.
ಈಗ ಅದೇ ಶಿವ ಸೇನೆ ವೈಯಕ್ತಿಕ ಹಿತಾಸಕ್ತಿಗೋಸ್ಕರ, ಅಧಿಕಾರದ ಲಾಭಗೋಸ್ಕರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದನ್ನು ಈ ದೇಶ ಯಾವತ್ತು ಮರೆಯಲು ಸಾಧ್ಯವಿಲ್ಲ ಎಂದು ಕಾರ್ಕಳದಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು.
ಇದನ್ನೂ ಓದಿ: ಹೊಸ ವರ್ಷ ಆರಂಭಕ್ಕೂ ಮುನ್ನ ರಾಜ್ಯದ ಜನತೆಗೆ ಇಂಧನ ಇಲಾಖೆಯಿಂದ ಸಿಹಿ ಸುದ್ದಿ..!