ಉಡುಪಿ : ಮೀಸಲಾತಿ ಕೇಳುವುದು ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇದನ್ನು ಪರಿಶೀಲಿಸಿ ಶಿಫಾರಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ನಿತ್ಯ ಹೋರಾಟಗಳು ನಡೆಯುತ್ತಿವೆ. ಸರ್ಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಮಾಡಲಿ ಎಂದು ಸಲಹೆ ನೀಡಿದರು.
ಯಾರಿಂದಲೂ 5 ಪೈಸೆ ಪಡೆದಿಲ್ಲ : ಐಎಂಎ ವಂಚಕ ಮನ್ಸೂರ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ಹಣ ಕೊಟ್ಟು ನನಗೆ ಕೊಟ್ಟಿದ್ದಾನೆ ಅಂದರೆ ಏನು ಪ್ರಯೋಜನ? ಅವನು ಯಾರಿಗೆ ಕೊಟ್ಟಿದ್ದಾನೆ ಅವನಿಂದ ವಸೂಲಿ ಮಾಡಲಿ. ಐ ಡೋಂಟ್ ನೋ.. ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ. ನನಗೆ ಮನ್ಸೂರ್‌ನಿಂದ ಹಣ ಪಡೆಯುವ ಯಾವ ಅಗತ್ಯವೂ ಇಲ್ಲ ಎಂದರು.
ಓದಿ: ಕೋವಿಡ್ 2ನೇ ಅಲೆ ಎದುರಿಸಲು ಬಿಬಿಎಂಪಿ ತಯಾರಿ : ನಿತ್ಯ ಟೆಸ್ಟಿಂಗ್ 30 ಸಾವಿರಕ್ಕೆ ಏರಿಕೆ
ಅಯೋಧ್ಯೆ ನಿಧಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಬಗ್ಗೆ ನಾನೇನು ತಪ್ಪು ಹೇಳಿದ್ದೇನೆ. ಅಯೋಧ್ಯೆಗೆ ನಾನು ನಿಧಿ ಕೊಡುವುದಿಲ್ಲ, ನನ್ನೂರಿನ ರಾಮಮಂದಿರಕ್ಕೆ ಕೊಡುತ್ತೇನೆ. ನಾನು ಹೇಳಿದ್ದು ತಪ್ಪಾ? ನಮ್ಮೂರಿನಲ್ಲಿ ಆಗ್ತಿರೋದು ರಾಮಮಂದಿರ ಅಲ್ವಾ? ನನ್ನೂರಲ್ಲಿ ಕಟ್ಟುವುದು ದಶರಥ ಪುತ್ರ ರಾಮ ಮಂದಿರ ಅಲ್ವಾ?
ನನ್ನ ಮಾತಿನಲ್ಲಿ ವಿವಾದ ಆಗುವಂಥದ್ದು ಏನಿದೆ ಎಂದು ಆರೋಪಗಳ ವಿರುದ್ಧ ಗರಂ ಆದ್ರು. ಬಿಜೆಪಿಯ ಒಬ್ಬರಲ್ಲೂ ದೇಶ ನಿಷ್ಠೆ ಇಲ್ಲ, ಬಿಜೆಪಿಯಿಂದ ಯಾರೂ ದೇಶಕ್ಕಾಗಿ ಸತ್ತಿಲ್ಲ. ಯಾವ ಸ್ವಾಮಿಗಳ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.