ಉಡುಪಿ : ಜೆಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿನ ಮನೆಗಳು ಆಸ್ತಿ-ಪಾಸ್ತಿ ಮುಳುಗಡೆಯಾಗಿವೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಚರ್ಚಿಸಿ ಅಗತ್ಯ ಪರಿಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಉಡುಪಿಯಲ್ಲಿ ಪ್ರವಾಹದ ಭೀತಿ ಕಾರಣದಿಂದ ಇನ್ನೂ ಹೆಚ್ಚಿನ ವಿಪತ್ತು ಪರಿಹಾರ ಕಾರ್ಯಪಡೆ ಕಳಿಸಿಕೊಡುವಂತೆ ರಾಜ್ಯದ ಮುಖ್ಯಕಾರ್ಯದರ್ಶಿ ಶ್ರೀ ಟಿ ಎಂ ವಿಜಯ ಭಾಸ್ಕರ್ ಅವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಈಗಾಗಲೇ ಮಂಗಳೂರಿನಿಂದ ಒಂದು NDRF ತಂಡ ಕಳುಹಿಸಿ ಕೊಟ್ಟಿದ್ದಾರೆ. ಈ ತಂಡ ಅಪಾಯದ ಪ್ರದೇಶದಲ್ಲಿರುವ ಜನರ ಸಹಾಯ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಇನ್ನೊಂದು 20 ಜನರನ್ನೊಳಗೊಂಡ NDRF ತಂಡವನ್ನು ಮೈಸೂರಿನಿಂದ ಈಗಾಗಲೇ ಕಳುಹಿಸಿಕೊಡಲಾಗಿದೆ ಹಾಗೂ ಸಂಸದರ ಬೇಡಿಕೆಯ ಮೇರೆಗೆ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್‌ಗಳು ಕೂಡ ಕೆಲವೇ ಗಂಟೆಗಳಲ್ಲಿ ಕಳುಹಿಸಿಕೊಡಲಾಗುತ್ತಿದೆ. ಬೆಂಗಳೂರು ಹಾಗೂ ಕಾರವಾರ ಕೇಂದ್ರದಿಂದ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಿ ಕೊಡುವುದಾಗಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಹೆಲಿಕಾಪ್ಟರ್‌ಗಳು ಕೆಲವೇ ಗಂಟೆಗಳಲ್ಲಿ ಉಡುಪಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ಭಾಗಿಯಾಗಲಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.