ಬೆಂಗಳೂರು: ಅಮಾನ್ಯಗೊಂಡ ನೋಟುಗಳ ವಿಲೇವಾರಿ ಮತ್ತು ವಿನಿಮಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2017ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಅಧೀನ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿ ಆದೇಶಿಸಿದೆ.
2016ರ ಡಿ.30ಕ್ಕೆ ಮುನ್ನ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಅಮಾನ್ಯಗೊಂಡ ನೋಟುಗಳಿಗೆ ಕೇಂದ್ರದ ನಿಯಮ ಅನ್ವಯವಾಗಲಿದೆ. ಕೇಂದ್ರ ಸರ್ಕಾರ ಹಲವು ಷರತ್ತುಗಳೊಂದಿಗೆ 2017ರ ಮೇ 12ರಂದು ಅಮಾನ್ಯಗೊಂಡ ನೋಟುಗಳ ವಿಲೇವಾರಿ, ನ್ಯಾಯಾಲಯದಿಂದ ಬಿಡುಗಡೆ ಮತ್ತು ವಿನಿಯಮಕ್ಕೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಹಾಗಾಗಿ ತನಿಖಾ ಸಂಸ್ಥೆಗಳು ಆ ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಆರ್‌ಬಿಐ ಪರ ವಾದಿಸಿದ್ದ ವಕೀಲರು, ಅಮಾನ್ಯಗೊಂಡ ಕರೆನ್ಸಿಯನ್ನು ಕಾನೂನುಬದ್ಧ ಟೆಂಡರ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದನ್ನು ಕೇಂದ್ರ ಸರ್ಕಾರ ಮಾತ್ರ ಪರಿಗಣಿಸಬಹುದು. ಹಾಗಾಗಿ ನ್ಯಾಯಾಲಯ, ಅರ್ಜಿದಾರರು ಬೇಕಿದ್ದರೆ ತಮ್ಮ ನೋಟುಗಳ ವಿನಿಯಮ ಸಂಬಂಧ ಕೇಂದ್ರ ಸರ್ಕಾರಕ್ಕೆ ನೇರವಾಗಿ ಮನವಿ ಸಲ್ಲಿಸಬಹುದು ಎಂದು ನಿರ್ದೇಶನ ನೀಡಿದೆ.
ಅಲ್ಲದೆ, ಆರ್‌ಬಿಐನ ವಕೀಲರು ಸರಿಯಾಗಿ ಸೂಚಿಸಿದಂತೆ, ತನಿಖಾ ಅಧಿಕಾರಿಗಳು ವಶಪಡಿಸಿಕೊಂಡಿರುವ ಬ್ಯಾಂಕ್ ನೋಟುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. 2017ರ ಮೇ 12ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿದೆ ಎಂದು ಪೀಠ ತಿಳಿಸಿದೆ.
ಜೊತೆಗೆ, ಅಂತಹ ಕಾರ್ಯವಿಧಾನವನ್ನು ಅನುಸರಿಸದಿದ್ದರೆ, ಕಾನೂನು ಬದ್ಧವಾಗಿ ಅಮಾನ್ಯಗೊಂಡ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ವಿಳಂಬವಾದ ಪ್ರಯತ್ನದಲ್ಲಿ ಯಾವುದೇ ಪಾತ್ರವನ್ನು ಹೊಂದಿರದ ಅನೇಕ ದಾವೆದಾರರು ಪೂರ್ವಾಗ್ರಹ ಪೀಡಿತರಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಇದರಿಂದ ದಾವೆಗಳು ಹೆಚ್ಚಾಗಲಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲಬುರಗಿ ಮೂಲದ ಸಂಜುಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಏಕ ಸದಸ್ಯ ಪೀಠ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು, ನೋಟು ನಿಷೇಧಿತ ಕರೆನ್ಸಿಯ ಮೌಲ್ಯವನ್ನು ಕಾನೂನು ಬದ್ಧವಾಗಿ ವಿನಿಮಯ ಮಾಡಿಕೊಳ್ಳಲು ತಮ್ಮ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಆರ್‌ಬಿಐಗೆ ನಿರ್ದೇಶನ ನೀಡಿ ಆದೇಶಿಸಿದೆ.
ಇದನ್ನೂ ಓದಿ: ದರ್ಶನ್ ಜೊತೆ ಧೂಮಪಾನ ಆರೋಪ: ಕೈದಿ ಸೀನ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ - High Court