ಕೆಲ ದಿನಗಳ ಹಿಂದಷ್ಟೇ ಇನ್ಫಿನಿಟಿ ರೋಡ್ ಎಂಬ ಕಾನ್ಸೆಪ್ಟ್ ಮೂಲಕ 'ಪಾರು ಪಾರ್ವತಿ' ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿತ್ತು. ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ಹಾಗೂ ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ. ಲಹರಿ ವೇಲು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡದ ಸಮ್ಮುಖದಲ್ಲಿ ವಿನೂತನ ಶೈಲಿಯಲ್ಲಿ ಹಾಡುಗಳನ್ನು ಲೋಕಾರ್ಪಣೆ ಮಾಡಿ ಗಮನ ಸೆಳೆದರು. ಬಳಿಕ ಚಿತ್ರತಂಡ ತಮ್ಮ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.
ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ , ನಾನು ಮೊದಲೇ ತಿಳಿಸಿದ ಹಾಗೆ ಪಿ.ವಾಸು, ಎಂ.ಮನೋನ್, ಅರವಿಂದ್ ಶಾಸ್ತ್ರಿ, ಸಿಂಪಲ್ ಸುನಿ ಸೇರಿದಂತೆ ಮೊದಲಾದ ನಿರ್ದೇಶಕರ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದೆ. ಸಂಪೂರ್ಣ ನಿರ್ದೇಶಕನಾಗಿ ನನಗಿದು ಚೊಚ್ಚಲ ಚಿತ್ರ. ಅವಕಾಶ ನೀಡಿದ ಪ್ರೇಂನಾಥ್ ಅವರಿಗೆ ಅಭಿನಂದನೆ. ಇದೊಂದು ಟ್ರಾವೆಲ್, ಅಡ್ವೆಂಚರ್ ಜಾನರ್ನ ಸಿನಿಮಾ. ಇದರಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸಿವೆ.
ಆರ್ ಹರಿ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಹಾಗೂ ನಾಲ್ಕು ಬೀಟ್ಗಳು ಚಿತ್ರದಲ್ಲಿವೆ. ಆದ್ರೆ ಜ್ಯೂಕ್ ಬಾಕ್ಸ್ ನಲ್ಲಿ ಹನ್ನೆರಡು ಹಾಡುಗಳು ಬಿಡುಗಡೆಯಾಗಿವೆ. ನಾಗಾರ್ಜುನ್ ಶರ್ಮಾ ಅವರು ಐದು ಹಾಡುಗಳನ್ನು ಬರೆದಿದ್ದಾರೆ. ಜೆಸ್ಸಿ ಗಿಫ್ಟ್, ವಿಜಯ್ ಜೇಸುದಾಸ್, ಆಂಟೋನಿ ಮ್ಯಕಿಯಾನ್ (ಐರೀಶ್ ಗಾಯಕ), ಔರಾ, ಎಂ.ಸಿ.ಬಿಜ್ಜು, ಚೇತನ್ ನಾಯಕ್, ದಿಯಾ ಹೆಗ್ಡೆ ಸೇರಿದಂತೆ 13 ಗಾಯಕರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಎಂ.ಆರ್.ಟಿ ಮ್ಯೂಸಿಕ್ ಮೂಲಕ ನಮ್ಮ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿವೆ ಎಂದು ತಿಳಿಸಿದರು.
ಇನ್ನೂ ಅಡ್ವೆಂಚರ್ ಕಥೆಯಾದ್ದರಿಂದ ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡ್ನಲ್ಲಿ ಚಿತ್ರೀಕರಣ ನಡೆದಿದೆ. ಮೂರು ಮುಖ್ಯಪಾತ್ರಗಳ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲೂ ಅಡ್ವೆಂಚರ್ಸ್ ಹಾಗೂ ಟ್ರಾವೆಲ್ನಲ್ಲಿ ಆಸಕ್ತಿಯಿರುವ ದೀಪಿಕಾ ದಾಸ್ ಅವರಿಗೆ ಇದು ಹೇಳಿ ಮಾಡಿಸಿದ ಪಾತ್ರ. ಈವರೆಗೂ ನೀವು ನೋಡಿರದ ದೀಪಿಕಾ ದಾಸ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಇವರ ಜೊತೆ ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿರುವ ನಮ್ಮ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದರು.
ಬಳಿಕ ದೀಪಿಕಾ ದಾಸ್ ಮಾತನಾಡಿ, ಇದೊಂದು ಪ್ರಯಾಣ ಹಾಗೂ ಅಡ್ವೆಂಚರ್ಸ್ ಕಥನಾ. ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. ಹಾಡುಗಳ ಮೂಲಕ ನಮ್ಮ ಚಿತ್ರ ಜನರನ್ನು ತಲುಪುತ್ತದೆ ಎಂಬ ವಿಶ್ವಾಸ ಇದೆ. ನನ್ನ ಮೊದಲ ಅಡ್ವೆಂಚರ್ ಕಥೆಯ ಸಿನಿಮಾವಿದು ಎಮದು ತಿಳಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಅನ್ನೇ ಕೆಣಕಿದ ಲಾಯರ್ ಜಗದೀಶ್! ಅಂತು ಇಂತೂ ಆಯ್ತು ಸುದೀಪ್ ಎಂಟ್ರಿ - Sudeep class to Lawyer Jagdish
ನಂತರ ಹಿರಿಯ ನಟಿ ಪೂನಂ ಸರ್ ನಾಯಕ್ ಮಾತನಾಡಿ, ಇದು ನಾನು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರ ಎಂದರು. ಇನ್ನೂ ನನ್ನ ಪಾತ್ರ ಕೂಡಾ ಚೆನ್ನಾಗಿದೆ ಎಂದು ಕೇರಳ ಮೂಲದ ನಟ ಫವಾಝ್ ಅಶ್ರಫ್ ಹೇಳಿದರು. ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.
ಈ ಸಿನಿಮಾಗೆ ಅಬಿನ್ ರಾಜೇಶ್ ಕ್ಯಾಮರಾ ವರ್ಕ್ ಇದ್ದು, ಆರ್ ಹರಿ ಸಂಗೀತ ನೀಡಿದ್ದಾರೆ. ಸಿ.ಕೆ ಕುಮಾರ್ ಸಂಕಲನ, ರಾಘು ಮೈಸೂರು ಕಲಾ ನಿರ್ದೇಶನವಿದೆ. ಗೀತರಚನೆಕಾರ ನಾಗಾರ್ಜುನ್ ಶರ್ಮಾ ಹಾಡುಗಳನ್ನು ಬರೆದಿದ್ದು, ಗಾಯಕರಾದ ಚೇತನ್ ನಾಯಕ್, ಔರಾ, ಎಂ.ಸಿ ಬಿಜ್ಜು, ಆಂಟೋನಿ ಮ್ಯಕಿಯಾನ್, ಚೇತನ್ ನಾಯಕ್ ಹಾಡಿದ್ದಾರೆ. ಏಂಟೀನ್ ತರ್ಟಿ ಸಿಕ್ಸ್ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ ಪಾರು ಪಾರ್ವತಿ ಸಿನಿಮಾ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರಲಿದೆ.