ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಲಾಡ್ಜ್‌ಗೆ 8 ಮಂದಿ ಕುಟುಂಬಸ್ಥರು ಆಗಮಿಸಿದ್ದಾರೆ. ಉಡುಪಿಯಲ್ಲಿರುವ ಖಾಸಗಿ ಲಾಡ್ಜ್‌ಗೆ ಬೆಳಗಾವಿ ಮತ್ತು ಬೆಂಗಳೂರಿನಿಂದ ಬಂದಿರುವ ಕುಟುಂಬಸ್ಥರು ನೇರ ರೂಮ್ ನಂಬರ್ 207 ರತ್ತ ತೆರಳಿದ್ದಾರೆ.
ನಾವು ಬರದೆ ಯಾವುದೇ ತನಿಖೆ ಮುಂದುವರೆಸಬೇಡಿ ಎಂದು ಹೇಳಿದ್ದ ಕಾರಣ ಕಳೆದ 12 ಗಂಟೆಗೂ ಅಧಿಕ ಕಾಲದಿಂದ ಸಹೋದರರ ಬರುವಿಕೆಗಾಗಿ ಉಡುಪಿ ಪೊಲೀಸರು ಕಾದಿದ್ದರು. ಸದ್ಯ ಸಂತೋಷ್ ಪಾಟೀಲ್ ಕುಟುಂಬಿಕರು ಉಡುಪಿಗೆ ಆಗಮಿಸಿದ್ದು, ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಇಂದು ಶವದ ಪಂಚನಾಮೆ ಮತ್ತು ಮರಣೋತ್ತರ ಪರೀಕ್ಷೆ ಸಾಧ್ಯತೆ ಇದೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಜಿಪಿ ದೇವ ಜ್ಯೋತಿ ರೇ ಭೇಟಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಲಾಡ್ಜ್‌ಗೆ ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತೋಷ್ ಕುಟುಂಬಸ್ಥರ ಬರುವಿಕೆಗೆ ಕಾಯುತ್ತಿದ್ದೆವು. ಕುಟುಂಬದವರು ಬಂದ ನಂತರ ತನಿಖೆ ಆರಂಭವಾಗಲಿದೆ. ಈ ಪ್ರಕರಣ ಬಹಳ ಸೂಕ್ಷ್ಮವಾಗಿದೆ. ಕುಟುಂಬಸ್ಥರು ಬಂದ ನಂತರ ವಿಧಿವಿಧಾನಗಳನ್ನು ಆರಂಭಿಸುತ್ತೇವೆ. ಮರಣೋತ್ತರ ಪರೀಕ್ಷೆಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಕುಟುಂಬಸ್ಥರು ಬಂದು ದೂರು ನೀಡಿದ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಸಹೋದರ ಘಟನಾ ಸ್ಥಳಕ್ಕೆ ಹೋಗುವ ಮುನ್ನ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲ್ಲ'