ಉಡುಪಿ: ಜಿಲ್ಲೆಯ ಕಾಪು ತಾಲೂಕು ಕೋಡಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಾರ್ಧನ್ ನಾಯಕ್ ಎಂಬುವರಿಗೆ ಸೇರಿದ ಮೂರು ಎಕರೆ ಜಮೀನು ಇದೆ. ಆ ಜಮೀನಿನ ಸುತ್ತಮುತ್ತಲ ರೈತರ ಮೂರು ಎಕರೆ ಕುಮ್ಕಿ ಭೂಮಿಯನ್ನು ಇವರು ಕಬಳಿಕೆ ಮಾಡಿಕೊಂಡಿದ್ದಾರೆ. ಸುತ್ತಮುತ್ತಲ ಮನೆಗೆ ಹೋಗುವ ಕಾಲು ದಾರಿ, ರಸ್ತೆ ಎಲ್ಲವನ್ನು ಅತಿಕ್ರಮಣ ಮಾಡಿ ಬೇಲಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸರ್ವೇ ನಂಬರ್ 6ರಲ್ಲಿ ಸುತ್ತಲ ಹತ್ತು ರೈತರ ಕೃಷಿ ಜಮೀನು ಇದೆ. ಆ ಜಮೀನಿಗೆ ಮೂರು ಎಕರೆ ಸರ್ಕಾರಿ ಕುಮ್ಕಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಸುವ ಅವಕಾಶವಿದೆ. ಆ ಮೂರೂವರೆ ಎಕರೆ ಜಮೀನನ್ನು ಜನಾರ್ದನ ನಾಯಕ್ ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾವು, ಹಲಸು, ಗೇರು ಹೀಗೆ ಎರಡು ಲಕ್ಷ ರೂಪಾಯಿ ಮರ ಕಡಿದು ಮಾರಿದ್ದಾರಂತೆ. ನೂರಾರು ಲೋಡು ಕಪ್ಪು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾರೆ. ಅತಿಕ್ರಮಣ ಮಾಡಿದ ಜಮೀನಿಗೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುತ್ತಿದ್ದು, ಇದನ್ನು ಪ್ರಶ್ನಿಸಲು ಹೋದವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಊರಿನ ಜನ ಗಂಭೀರ ಆರೋಪ ಮಾಡುತ್ತಿದ್ದಾರೆ.
ಓದಿ:ಗೋಶಾಲೆಗಾಗಿ ಮೇವು ಕಟಾವು ಮಾಡಿದ ಪಲಿಮಾರು ಶ್ರೀಗಳು!
ಈ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಹಶೀಲ್ದಾರ್, ಪಂಚಾಯಿತಿಯ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದಾರಂತೆ.