ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿರುವ ಕುರಿತು ಶಾಸಕ ರಘುಪತಿ ಭಟ್ ಹಾಗೂ ಶಾಸಕ ಸುನೀಲ್ ಕುಮಾರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಷ್ಟ್ರೀಯವಾದಿಯಾಗಿ ಮೋದಿ ನೇತೃತ್ವದ ಬಿಜೆಪಿಗೆ ಅಣ್ಣಾಮಲೈ ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಇದರಿಂದ ತಮಿಳುನಾಡು ರಾಜಕಾರಣಕ್ಕೆ ಹೊಸ ದಿಕ್ಕನ್ನು ತೋರಿಸಲಿದೆ. ಅಣ್ಣಾಮಲೈ ಅವರು ಉಡುಪಿಯಲ್ಲಿ ಎಸ್ಪಿಯಾಗಿದ್ದಾಗ ಬಹಳ ಜನಾನುರಾಗಿಯಾಗಿದ್ದರು. ಇವತ್ತಿಗೂ ಅವರ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಅಣ್ಣಮಲೈ ಅವರು ಭಾರತೀಯ ಜನತಾ ಪಕ್ಷಕ್ಕೆ ಒಂದು ಒಳ್ಳೆಯ ಕೊಡುಗೆಯಾಗುತ್ತಾರೆ. ಅವರ ರಾಜಕೀಯ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಶಾಸಕ ಸುನೀಲ್ ಕುಮಾರ್ ಮಾತನಾಡಿ, ಅಣ್ಣಾಮಲೈ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು. ಕಾರ್ಕಳದ ಎಎಸ್ಪಿಯಾಗಿ ಕರ್ತವ್ಯ ಆರಂಭಿಸಿದವರು. ಅವರು ಬಿಜೆಪಿ ಸೇರಿದ್ದು ಬಹಳ ಸಂತೋಷವಾಗಿದೆ. ಕರ್ತವ್ಯದಲ್ಲೇ ಜನಪರ ಯೋಚನೆ ಮಾಡಿದ ವ್ಯಕ್ತಿಯ ರಾಜಕೀಯ ಜೀವನ ಉಜ್ವಲವಾಗಲಿ. ತಮಿಳುನಾಡಿನಲ್ಲಿ ಬಿಜೆಪಿ ಬೇರು ಗಟ್ಟಿಯಾಗಲಿ ಎಂದು ಆಶಿಸಿದರು.