ಉಡುಪಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ವಿಠಲ ಗೊಲ್ಲ (42) ಹೊಳೆ ನೀರಿಗೆ ಕೊಚ್ಚಿ ಹೋದ ವ್ಯಕ್ತಿ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿ ಘಟನೆ ನಡೆದಿದ್ದು, ಮನೆ ಸಮೀಪ ಹರಿಯುವ ಹೊಳೆ ಬದಿಗೆ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಜು. 8ರಂದು ಮಧ್ಯಾಹ್ನ ವಿಠಲ ಗೊಲ್ಲ ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಕಲ್ಲಿನ ಮೇಲೆ ಕಾಲು ಇಟ್ಟಾಗ ಮಣ್ಣು ಸಡಿಲಗೊಂಡು ಬಿದ್ದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದೀಗ ವಿಠಲ ಗೊಲ್ಲರ ಶವ ಪತ್ತೆಯಾಗಿದ್ದು, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.