ಉಡುಪಿ: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿವಾದಕ್ಕೆ ಸದ್ಯ ತೆರೆ ಬೀಳುವಂತೆ ಕಾಣುತ್ತಿಲ್ಲ. ಕುಂದಾಪುರ ಕಾಲೇಜು ಕ್ಯಾಂಪಸ್ ಒಳಗೆ ಬಂದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮೈದಾನದಲ್ಲೇ ತಡೆದು ನಿಲ್ಲಿಸಿದ್ದಾರೆ. ತರಗತಿಗೆ ಬಿಡುವಂತೆ ವಿದ್ಯಾರ್ಥಿನಿಯರ ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಜೊತೆ ಪೋಷಕರು ಆಗಮಿಸಿದ್ದು, ಉಪನ್ಯಾಸಕರು, ಪ್ರಾಂಶುಪಾಲರು ಕೂಡಾ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದಾರೆ. ಉಪನ್ಯಾಸಕರಿಂದ ಮಕ್ಕಳ ಮನವೊಲಿಕೆ ಪ್ರಯತ್ನ ನಡೆದಿದೆ. ಕನಿಷ್ಠ ಪಕ್ಷ ಸ್ಟೇಜ್ ಬಳಿ ಕೂರಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದಾರೆ.
ಇದೇ ವಿಚಾರ ಸಂಬಂಧ ಕುಂದಾಪುರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ವಿದ್ಯಾರ್ಥಿಗಳ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ನಡೆಸಿದರೆ ಎಫ್‌ಐಆರ್ ದಾಖಲು ಮಾಡುವ ಎಚ್ಚರಿಕೆ ನೀಡಿದ್ದಾರೆ. ಸ್ಕಾರ್ಪ್ ವಿವಾದ ಬಗ್ಗೆ ಮಾತನಾಡಿದ ಕುಂದಾಪುರದ ವಿದ್ಯಾರ್ಥಿನಿ ಹಿಜಾಬ್ ನಮ್ಮ ಜೀವನದ ಭಾಗ. ನಮ್ಮ ಹಿರಿಯರು ಹಿಜಾಬ್ ಧರಿಸುತ್ತಿದ್ದರು. ನನ್ನತ್ತೆ ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅಚಾನಕ್ಕಾಗಿ ಈ ರೂಲ್ಸ್ ಯಾಕೆ ಬಂತು. ನಾವು ಹಿಜಾಬ್ ಹಾಕಿದರೆ ಯಾರಿಗೆ ಏನು ತೊಂದರೆ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪ್ರಶ್ನೆಗೆ ಉತ್ತರವೇ ಇಲ್ಲ. ಪ್ರಾಂಶುಪಾಲರು ಸರ್ಕಾರದ ಸೂಚನೆ ಎನ್ನುತ್ತಾರೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ? ನಿನ್ನೆಯಿಂದ ಗೇಟಿನ ಒಳಗೆ ನಮ್ಮನ್ನು ಬಿಡುತ್ತಿಲ್ಲ. ನಮಗೆ ಯಾರು ಸಪೋರ್ಟ್ ಮಾಡ್ತಾಯಿಲ್ಲ. ಹಿಜಾಬ್‌ಗೆ ಅವಕಾಶ ಬೇಕು. ಶಿಕ್ಷಣ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಂದುವರಿದ ಹಿಜಾಬ್ ವಿವಾದ: ಕುಂದಾಪುರದಲ್ಲಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು