ಉಡುಪಿ: ಲಾರಿಯಲ್ಲಿ ಹಿಂಸಾತ್ಮಕವಾಗಿ 18 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದ ನಿವಾಸಿ ನಜೀರುಲ್ಲ (43) ಮತ್ತು ಮೈಸೂರಿನ ರಾಘವೇಂದ್ರ (25) ಬಂಧಿತ ಆರೋಪಿಗಳು. ಆರೋಪಿಗಳು ಮಂಗಳೂರು ನೋಂದಣಿ ಸಂಖ್ಯೆಯ (ಕೆಎ 19 ಎ 1801) 10 ಚಕ್ರದ ಲಾರಿಯಲ್ಲಿ 18 ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ ಕೆ. ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವದ ತಂಡವು ತ್ರಾಸಿ ಮರವಂತೆಯ ಬಳಿ ದಾಳಿ ನಡೆಸಿದೆ.
ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ಲಾರಿ ಬಿಟ್ಟು ಓಡಿ ಹೋಗಿದ್ದಾರೆ. ತಕ್ಷಣ ಬೆನ್ನಟ್ಟಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗಾಟದ ವೇಳೆ ಎರಡು ಎತ್ತುಗಳು ಸಾವನ್ನಪ್ಪಿದ್ದು, ಉಳಿದ 16 ಎತ್ತುಗಳನ್ನು ರಕ್ಷಿಸಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ, ಮಹಾರಾಷ್ಟ್ರದ ಸೊಲ್ಲಾಪುರದಿಂದ ಕಾಸರಗೋಡಿನ ಚೇರ್ಕಳಕ್ಕೆ ಎತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರನ್ವಯ ಪ್ರಕರಣ ದಾಖಲಾಗಿದೆ.