ಉಡುಪಿ: ಆಕೆ ಇಂದಿರಾ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವಳೆಂದ್ರೆ ತುಂಬಾ ಪ್ರೀತಿ. ಆಕೆ ಮೂಕಾಂಬಿಕೆಯ ಪರಮಭಕ್ತೆ. ದಿನವೂ ತಪ್ಪದೇ ತಾಯಿಯ ಸೇವೆ ಮಾಡುತ್ತಿದ್ದವಳು. ಪ್ರತಿದಿನ ತಾಯಿಯ ಸೇವೆಗೆ ಬರುತ್ತಿದ್ದವಳು ಕಳೆದ ಹತ್ತು ದಿನ ಬರಲೇ ಇಲ್ಲ. ಏನಾಗಿದೆ ಅಂತ ಹೋಗಿ ನೋಡಿದ್ರೆ ಆಕೆಯ ಶವ ಧರಾಶಾಹಿಯಾಗಿತ್ತು. ಈ ಸಾವು ಕೊಲ್ಲೂರಮ್ಮ ಭಕ್ತರನ್ನು ತಲ್ಲಣಗೊಳಿಸಿರೋದು ಮಾತ್ರವಲ್ಲ, ಆಕ್ರೋಶಕ್ಕೂ ಕಾರಣವಾಗಿದೆ.
ಮೂಕಾಂಬಿಕೆಯ ಸೇವೆಗಾಗಿ ಕೇರಳ ಮೂಲದ ಭಕ್ತ ಮಧು ಎನ್ನುವರು 2 ದಶಕದ ಹಿಂದೆ ಹರಕೆ ರೂಪದಲ್ಲಿ ಇಂದಿರೆಯನ್ನು ದಾನ ನೀಡಿದ್ರು. ಆಕೆಯ ಲಾಲನೆ-ಪಾಲನೆಗೆ ಬೇಕಾದ ಹಣವನ್ನೂ ಕೊಟ್ಟಿದ್ರು. ಮರದ ಮಿಲ್ನಲ್ಲಿ ದುಡಿಯುತ್ತಿದ್ದ ಇಂದಿರಾಗೆ ಕ್ಷೇತ್ರದ ಸೇವೆಯಿಂದ ಖುಷಿಯೂ ಆಗಿತ್ತು. ಕೊಲ್ಲೂರು ಕ್ಷೇತ್ರಕ್ಕೆ ಬರುವ ವೇಳೆಗೆ 40 ವರ್ಷ ತುಂಬಿದ್ದ ಇಂದಿರಾಗೆ ಇನ್ನು 13 ದಿನಗಳು ಕಳೆದಿದ್ರೆ 62 ವರ್ಷ ಪೂರ್ಣವಾಗ್ತಿತ್ತು. ಆದ್ರೆ ವಿಪರೀತ ಮಳೆಯ ಪರಿಣಾಮ 20 ದಿನಗಳಿಂದ ಆನೆ ಇಂದಿರಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆದ್ರೆ ಮಂಗಳವಾರ ಸಂಜೆಯ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ವಿಪರೀತ ಜ್ವರಬಾಧೆಯೇ ಇಂದಿರಾಳ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ಈಕೆಯದ್ದು ಸಹಜ ಸಾವಿನಂತೆ ಕಂಡರೂ, ಇಲ್ಲಿ ಆನೆಗಾದ ಅನ್ಯಾಯ ಎದ್ದು ಕಾಣುತ್ತೆ. ಮಳೆ-ಗಾಳಿಯ ಹೊಡೆತಕ್ಕೆ ರಕ್ಷಣೆ ಪಡೆಯಲು ಈಕೆಗಿದ್ದದ್ದು ಕೇವಲ, ಒಂದು ತಗಡಿನ ಮಾಡು. ಕೊಲ್ಲೂರು ಕ್ಷೇತ್ರದ ಆಸುಪಾಸಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆ ಬೀಳುತ್ತಿದೆ. ಹೀಗಾಗಿ ಸುತ್ತಲೂ ನೀರಿನ ಹೊಡೆತದಿಂದ ಶೀತಜ್ವರ ಬಾಧೆ ಉಂಟಾಗಿತ್ತು. ಆನೆಯ ಸಾವಿಗೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಆನೆ ಮೇಲ್ವಿಚಾರಣೆ ನಡೆಸುವವರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆನೆ ವಾಸವಿದ್ದ ಲಾಯ ಅವ್ಯವಸ್ಥಿತವಾಗಿದ್ದು, ಆಹಾರ, ಪಾಲನೆ-ಪೋಷಣೆಯಲ್ಲಿ ದೇವಳದ ಆಡಳಿತ ಮಂಡಳಿ ಹಾಗೂ ಸರ್ಕಾರ ನಿರ್ಲಕ್ಷ್ಯ ತೋರಿದೆ ಅನ್ನೋದು ಸ್ಥಳೀಯರು ಮತ್ತು ಭಕ್ತರ ದೂರು.
ಕೊಲ್ಲೂರಿನ ಹೆಮ್ಮೆಯಂತಿದ್ದ ಇಂದಿರಾಳ ಅಂತ್ಯಸಂಸ್ಕಾರದಲ್ಲಿ ಅನೇಕ ಭಕ್ತರು ಭಾಗಿಯಾಗಿದ್ರು. ಮಳೆಯನ್ನೂ ಲೆಕ್ಕಿಸದೇ ನೂರಾರು ಭಕ್ತರು ಬಂದಿದ್ರು. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಪೋಸ್ಟ್ ಮಾರ್ಟಂ ಮಾಡಿದ ನಂತ್ರ, ಗಜೇಂದ್ರ ಮೋಕ್ಷವನ್ನು ಹೋಮ ನಡೆಸಲಾಯ್ತು. ಅರಣ್ಯ ಇಲಾಖೆಯ ನೀತಿಯ ಅನುಸಾರವಾಗಿ ಆನೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇಂದಿರಾಳ ಸಾವು, ಮೂಕಪ್ರಾಣಿಗಳನ್ನು ಈ ರೀತಿಯ ಧಾರ್ಮಿಕ ಸೇವೆಗೆ ಬಳಸಿಕೊಳ್ಳೋದು ಎಷ್ಟು ಸರಿ ಅನ್ನೋ ಜಿಜ್ಞಾಸೆಯನ್ನೂ ಹುಟ್ಟುಹಾಕಿದೆ.