ಉಡುಪಿ: ಜಾತಿಗಣತಿಗೆ ಸುಮಾರು 150 ಕೋಟಿ ರೂಪಾಯಿ ಖರ್ಚಾಗಿದೆ. ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ದಪಡಿಸಿದ್ದಾರೆ, ಹೀಗಾಗಿ ಆ ವರದಿಯನ್ನ ಹೊರತರಬೇಕು ಎಂದು ಉಡುಪಿಯಲ್ಲಿ ಡಾ.ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ.
ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ. ಹೀಗಾಗಿ ಅದನ್ನು ಹೊರತರಲು ಆಗಿರಲಿಲ್ಲ. ಕಾಂತರಾಜ್ ಅವರು ಈಗ ವರದಿಯನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಿ. ವರದಿಯಲ್ಲಿ ನ್ಯೂನತೆ ಇದ್ದರೆ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ. ವರದಿ ಬಹಿರಂಗ ಮಾಡುವುದರಿಂದ ಸರಕಾರಕ್ಕೆ ಮುಜುಗರ ಏನಿದೆ. ಯಾವುದೇ ಸಮುದಾಯ ಹೆಚ್ಚಿರುವುದು, ಕಡಿಮೆ ಇರುವುದು ಸ್ವಾಭಾವಿಕ ಎಂದರು.
ಮಹಾನಗರ ಪಾಲಿಕೆ ಚುನಾವಣೆ ಕಾಂಗ್ರೆಸ್ಗೆ ಹಿನ್ನಡೆ ವಿಚಾರ ಮಾತನಾಡಿ, ಡಿಕೆಶಿ - ಸಿದ್ದರಾಮಯ್ಯ ಚುನಾವಣೆಯಲ್ಲಿ ಹೆಚ್ಚು ಭಾಗವಹಿಸಿಲ್ಲ. ಇದು ಚರ್ಚಿಸಬೇಕಾದ ದೊಡ್ಡ ವಿಚಾರ ಅಲ್ಲ. ಸ್ಥಳೀಯ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ನನ್ನ ಅವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಕಾಂಗ್ರೆಸ್ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ. ಇಂತಹ ಸುದ್ದಿಯನ್ನ ಯಾರೋ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದೆ. ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್ನಲ್ಲಿ ಇಲ್ಲ. ಕಾಂಗ್ರೆಸ್ನಲ್ಲಿ ಬಾಗಿಲುಗಳ ಕಲ್ಪನೆ ಯಾರದ್ದೊ ಸೃಷ್ಟಿ. ಪಕ್ಷ ಸಂಘಟನೆ ಮಾಡುವಲ್ಲಿ ಸಿದ್ದರಾಮಯ್ಯ ಡಿಕೆಶಿಗೆ ಜವಾಬ್ದಾರಿಯಿದೆ ಎಂದರು.