ಉಡುಪಿ : ಕೊರೊನಾ ಎರಡನೇ ಅಲೆಯ ತೀವ್ರತೆ ಎಷ್ಟರ ಮಟ್ಟಿಗಿದೆ ಅನ್ನೋದಕ್ಕೆ ಮಣಿಪಾಲದ ಎಂಐಟಿ ಕ್ಯಾಂಪಸ್ ಸಾಕ್ಷಿಯಾಗಿದೆ. ಕೇವಲ ಎರಡು ವಾರದ ಅವಧಿಯಲ್ಲಿ ಬರೋಬ್ಬರಿ ಒಂದು ಸಾವಿರ ಪ್ರಕರಣ ದಾಖಲಾಗುವ ಮೂಲಕ ಎಂಐಟಿ ಕ್ಯಾಂಪಸ್ ಆತಂಕ ಸೃಷ್ಟಿಸಿದೆ.
ಜನವರಿ ತಿಂಗಳಲ್ಲಿ ಶೇ.0.1ಕ್ಕೆ ಇಳಿದಿದ್ದ ಉಡುಪಿ ಜಿಲ್ಲೆಯ ಪಾಸಿಟಿವಿಟಿ ರೇಟ್ ಈಗ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಮಣಿಪಾಲದ ಎಂಐಟಿ ಕ್ಯಾಂಪಸ್ನ ಸದ್ಯದ ಪಾಸಿಟಿವಿಟಿ ರೇಟ್ ಶೇ.15 ತಲುಪಿದೆ. ಅಂದ್ರೆ ಈ ಕ್ಯಾಂಪಸ್ನ ನೂರು ಮಂದಿಯಲ್ಲಿ 15 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಕೊರೊನಾದ ಈ ನಾಗಲೋಟದ ಕಾರಣಕ್ಕೆ ಉಡುಪಿ ಜಿಲ್ಲೆಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಎಂಐಟಿ ಕ್ಯಾಂಪಸ್ಗೆ ಭೇಟಿ ನೀಡಿದ್ರು. ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿ, ಎಂಐಟಿ ಮಾತ್ರವಲ್ಲ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಆವರಣದಲ್ಲಿ ಮತ್ತಷ್ಟು ಕೊರೊನಾ ಟೆಸ್ಟ್ ನಡೆಸುವಂತೆ ಸೂಚಿಸಿದ್ರು.
ಇಷ್ಟು ಪ್ರಕರಣ ದಾಖಲಾಗಲು ಕಾರಣವೇನು?: ಈ ಕ್ಯಾಂಪಸ್ನಲ್ಲಿ ಒಂಬತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಈ ದಟ್ಟಣೆಯಿಂದ ಕೊರೊನಾ ಹಬ್ಬಿದೆ. ಅಷ್ಟು ಮಾತ್ರವಲ್ಲ, ಎಕ್ಸಾಂ ಬರೆಯಲು ಬಂದಿದ್ದ ಎರಡನೇ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತ್ರ ಬೇಕಾಬಿಟ್ಟಿ ಪಾರ್ಟಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ನಿರ್ಲಕ್ಷ್ಯ ಧೋರಣೆ ಕೂಡ ಕೊರೊನಾ ಹಬ್ಬಲು ಕಾರಣ ಎಂಬ ಅಂಶ ಇದೀಗ ಬಯಲಾಗಿದೆ. ಕೊರೊನಾ ಬಗ್ಗೆ ಎಂಜಿನಿಯಂರಿಂಗ್ ವಿದ್ಯಾರ್ಥಿಗಳು ತೋರಿದ ಈ ಅಸಡ್ಡೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಆದರೆ, ಅದೃಷ್ಟವಷಾತ್ ಯಾವೊಬ್ಬ ವಿದ್ಯಾರ್ಥಿಗೂ ರೋಗ ಲಕ್ಷಣ ವಿಲ್ಲದಿರುವುದು ಕೊಂಚ ನೆಮ್ಮದಿ ಮೂಡಿಸಿದೆ.
ಈಗಾಗಲೇ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸ್ವ್ಯಾಬ್ ಟೆಸ್ಟ್ ಮುಗಿದಿದೆ. ಮುಂದಿನ ದಿನಗಳಲ್ಲಿ ಬಫರ್ ಝೋನ್ ವ್ಯಾಪ್ತಿಯಲ್ಲಿ ಪರೀಕ್ಷೆ ತೀವ್ರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಓದಿ:ರಾಜ್ಯದಲ್ಲಿಂದು 2975 ಹೊಸ ಕೋವಿಡ್ ಪ್ರಕರಣ: ಮಹಾಮಾರಿಗೆ 21 ಮಂದಿ ಬಲಿ
ಕೇವಲ ಎಂಐಟಿ ಕ್ಯಾಂಪಸ್ ಮಾತ್ರವಲ್ಲ ಉಡುಪಿಯ ಶಂಕರನಾರಾಯಣ, ಕಾರ್ಕಳ, ಕುಂಜಾರುಗಿರಿಯಲ್ಲಿನ ಶಾಲಾ-ಕಾಲೇಜಿನಲ್ಲೂ ಹೆಚ್ಚಿನ ಪ್ರಕರಣ ಪತ್ತೆಯಾಗುತ್ತಿವೆ. ಕೊರೊನಾ ಎರಡನೇ ಅಲೆಗೆ ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ತರಗತಿ ಮುಂದುವರಿದಿವೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕಾದ ಅಗತ್ಯವಿದೆ.