ಉಡುಪಿ: ಜಿಲ್ಲೆಯ ಕೋಟಾದಲ್ಲಿ ನಡೆದ ಎರಡು ಕೊಲೆ ಪ್ರಕರಣದ ಆರೋಪಿ, ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ.
ಕಳೆದ ವರ್ಷ ಜನವರಿ 26ರಂದು ಕೋಟಾ ಸಮೀಪದ ಮಣೂರಿನಲ್ಲಿ ರಾತ್ರಿ 10.30ರ ಸುಮಾರಿಗೆ ಭರತ್ ಮತ್ತು ಯತೀಶ್ನನ್ನು ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಸಂಚು ರೂಪಿಸಿದ ಆರೋಪ ಈತನ ಮೇಲಿತ್ತು.
ರಾಘವೇಂದ್ರ ಕಾಂಚನ್ ಪಡೆದ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಬಳಿಕ ಈ ಬಗ್ಗೆ ಭರತ್ ತಾಯಿ ಪಾರ್ವತಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದೇಶವಾಗಿ 15 ದಿನ ಕಳೆದರೂ ಪೊಲೀಸರು ಈತನನ್ನು ಬಂಧಿಸಿರಲಿಲ್ಲ. ಈ ಬಗ್ಗೆ ಮೃತರ ಮನೆಯವರು ಹೋರಾಟದ ಎಚ್ಚರಿಕೆ ನೀಡಿದ್ದರು.
ವಕೀಲರ ಮೂಲಕ ಆಗಮಿಸಿದ ರಾಘವೇಂದ್ರ ಕಾಂಚನ್ ಶರಣಾಗತಿಯಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಿರಿಯಡ್ಕ ಕಾರಾಗೃಹಕ್ಕೆ ರವಾನಿಸಲಾಗಿದೆ. ಇದರಲ್ಲಿ ಭಾಗಿಯಾದ 18 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೆಲ ಆರೋಪಿಗಳು ಜಾಮೀನು ಪಡೆದಿದ್ದರು.
ಜಾಮೀನು ವಜಾಗೊಳಿಸಿದ ಬೆನ್ನಲ್ಲೆ ರಾಘವೇಂದ್ರ ಕಾಂಚನ್ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ರಾಜಕೀಯ ಒತ್ತಡದಿಂದ ಪೊಲೀಸರು ಬಂಧಿಸಿಲ್ಲ ಎಂದು ಕೊಲೆಯಾದ ಯುವಕರ ಕುಟುಂಬಿಕರು ಆರೋಪಿಸಿದ್ದರು. ಅಲ್ಲದೆ ಫೆ.7ರೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಉಡುಪಿ ಎಸ್ಪಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದರು.